ಸಿದ್ದರಾಮಯ್ಯ ಉತ್ತಮ ಆಡಳಿತ ನಡೆಸಿದ್ದರೆ ಶಾಸಕರ ಸಂಖ್ಯೆ 78ಕ್ಕೆ ಏಕೆ ಇಳಿಯಿತು:? ಎಚ್.ವಿಶ್ವನಾಥ್

ಮೈಸೂರು,ಮೇ.12: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ಉತ್ತಮ ಆಡಳಿತ ನಡೆಸಿದ್ದಾರೆ. ಹಾಗಿದ್ದ ಮೇಲೆ 130 ಇದ್ದ ಕಾಂಗ್ರೆಸ್ ಶಾಸಕರ ಸಂಖ್ಯೆ 78 ಕ್ಕೆ ಏಕೆ ಇಳಿಯಿತು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಐದು ವರ್ಷ ಉತ್ತಮ ಆಡಳಿತ ನಡೆಸಿದ್ದ ಮೇಲೆ ಕಾಂಗ್ರೆಸ್ ಶಾಸಕರ ಸಂಖ್ಯೆ ಏಕೆ ಕಡಿಮೆಯಾಯಿತು. ಕೆಲವರು ಬಾಯಿ ಚಪಲಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎನ್ನುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ ಕೇವಲ ಒಂದು ವರ್ಷಗಳಾಗುತ್ತಿದೆ. ಇನ್ನೂ ಸಮಯಾವಕಾಶ ನೀಡಬೇಕಿದೆ. ಅಂತಹದರಲ್ಲಿ ಕುಮಾರಸ್ವಾಮಿಯವರನ್ನು ಕೆಳಗಿಳಿಸಲು ಏಕೆ ಇಂತಹ ತಂತ್ರ ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಿದರು.
ನಾವು ಐದು ವರ್ಷ ಆಡಳಿತ ನಡೆಸಬೇಕು ಎಂದು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೆವು. ಈ ಹಿಂದೆ ಕಾಂಗ್ರೆಸ್ ಪಕ್ಷದ ವರಿಷ್ಠರು ಐದು ವರ್ಷ ಎಚ್.ಡಿ.ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಎಂದು ಹೇಳಿದ್ದರು. ಅಂತಹದರಲ್ಲಿ ಏಕೆ ದಿನಕ್ಕೊಬ್ಬರು ಸರ್ಕಾರಕ್ಕೆ ಅಪಾಯಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸ್ವಲ್ಪ ತಡೆಯಿರಿ, ಐದು ವರ್ಷ ಪೂರೈಸಿದ ಮೇಲೆ ನೀವು ಚುನಾವಣೆಗೆ ಹೋಗಿ ಗೆದ್ದು ಬನ್ನಿ. ಆಗ ನೀವೇ ಮುಖ್ಯಮಂತ್ರಿಗಳಾಗಿ ಎಂದು ಹೇಳಿದರು.





