ನಗರದ ಸಾರಿಗೆ ಸಮಸ್ಯೆ ನಿವಾರಣೆ ಕೆಆರ್‌ಡಿಸಿಎಲ್ ಸಂಕಲ್ಪ: ಎಂ.ಡಿ.ಶಿವಕುಮಾರ್
ಬೆಂಗಳೂರು, ಮೇ 12: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್) ಬೆಂಗಳೂರು ನಗರದ ಮಹತ್ವಾಕಾಂಕ್ಷೆಯ ಎಲಿವೇಟೆಡ್ ಕಾರಿಡಾರ್‌ಗಳನ್ನು ನಿರ್ಮಾಣ ಮಾಡುವ ಮಹತ್ವದ ಯೋಜನೆಯನ್ನು ಶೀಘ್ರದಲ್ಲೆ ಆರಂಭಿಸಲಿದೆ.
ಉದ್ದೇಶಿತ ಯೋಜನೆಯಡಿ ಸಾರ್ವಜನಿಕ ಸಾರಿಗೆಗೆ ಪ್ರತ್ಯೇಕ ಪಥವನ್ನೂ ನಿರ್ಮಿಸಲಿದ್ದು, ಈ ಯೋಜನೆ ನಾಲ್ಕು ಹಂತಗಳಲ್ಲಿ ಅನುಷ್ಠಾನಕ್ಕೆ ಬರಲಿದೆ ಮತ್ತು ಸಂಚಾರ ದಟ್ಟಣೆ ನಿವಾರಣೆ, ತಡೆರಹಿತ ಸಾರಿಗೆ ಹಾಗೂ ಪ್ರಯಾಣ ಸಮಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಕೆಆರ್‌ಡಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಒಂದು ಸಮಗ್ರ ಪರಿಹಾರವನ್ನು ಎದುರು ನೋಡುತ್ತಿದೆ. ಉದ್ದೇಶಿತ ಎಲಿವೇಟೆಡ್ ಕಾರಿಡಾರ್ ಯೋಜನೆಯು ಈ ದಿಸೆಯಲ್ಲಿ ಪರಿಹಾರದ ಒಂದು ಪ್ರಮುಖ ಅಂಶವಾಗಿದೆ. ಸಬರ್ಬನ್ ರೈಲ್ವೆ ಜಾಲ, ಪ್ರಸ್ತುತದ ಮತ್ತು ಉದ್ದೇಶಿತ ಮೆಟ್ರೋ ಜಾಲ, ಮೇಲ್ಸೇತುವೆಗಳು, ಆರ್‌ಒಬಿಗಳು ಮತ್ತು ವರ್ತುಲ ರಸ್ತೆಗಳೊಂದಿಗೆ ಈ ಉದ್ದೇಶಿತ ಎಲಿವೇಟೆಡ್ ಕಾರಿಡಾರ್ ಯೋಜನೆಯು ಬರುವುದರಿಂದ ಬೆಂಗಳೂರು ನಗರದ ವಾಹನ ದಟ್ಟಣೆ ಸಮಸ್ಯೆಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಬೆಂಗಳೂರು ಕಮ್ಯುಟರ್ ರೈಲು ಮತ್ತು ಮೆಟ್ರೋ ರೈಲು ಮಾರ್ಗವನ್ನು ಹೊಂದಿರುವ ನಗರ ಸಾರಿಗೆ ಜಾಲವು ಹೊರ ವರ್ತುಲ ರಸ್ತೆ ಮತ್ತು ರಸ್ತೆ ಮೇಲ್ಸೇತುವೆ/ಕೆಳಸೇತುವೆಗಳನ್ನು ಹೊಂದುವ ಮೂಲಕ ನಗರದ ಪ್ರಮುಖ ಭಾಗಗಳಿಗೆ ಗಣನೀಯ ಪ್ರಮಾಣದಲ್ಲಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ. ಇದೀಗ ಎಲಿವೇಟೆಡ್ ಕಾರಿಡಾರ್‌ನ ಯೋಜನೆಯು ಹಾಲಿ ಇರುವ ಪ್ರಯಾಣಿಕರ ಸಾರಿಗೆ ಸಮಸ್ಯೆಗಳನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಹೆಬ್ಬಾಳದಿಂದ ಸಿಲ್ಕ್ ಬೋರ್ಡಿಗೆ ತಲುಪಬೇಕಾದರೆ ಸರಾಸರಿ 100 ನಿಮಿಷಗಳು ಬೇಕಾಗುತ್ತದೆ ಮತ್ತು ಹೆಬ್ಬಾಳದಿಂದ ಲಾಲ್‌ಬಾಗ್ ನಡುವಿನ ಕೇವಲ 15 ಕಿ.ಮೀ. ದೂರವನ್ನು ಕ್ರಮಿಸಬೇಕಾದರೆ 60 ನಿಮಿಷಗಳು ಬೇಕಾಗುತ್ತದೆ. ಪೀಕ್ ಅವರ್‌ನಲ್ಲಿ ಈ ಅವಧಿ ಇನ್ನೂ ಹೆಚ್ಚಾಗುತ್ತದೆ. ಉದ್ದೇಶಿತ ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಮತ್ತು ಕೇಂದ್ರ ಎಲಿವೇಟೆಡ್ ಕಾರಿಡಾರ್ ದಟ್ಟಣೆಯನ್ನು ಕಡಿಮೆ ಮಾಡಲಿದೆ. ಈ ಯೋಜನೆಯಲ್ಲಿ 87.87 ಕಿ.ಮೀ.ಉದ್ದದ ಬಹು ಪಥದ ರಸ್ತೆಗಳನ್ನು ನಿರ್ಮಾಣ ಮಾಡಲಿದ್ದು, ಇದರಿಂದ ನಗರದ ಯಾವುದೇ ಭಾಗವನ್ನು ತಲುಪಲು ಕೇವಲ 45 ನಿಮಿಷ ಸಾಕಾಗುತ್ತದೆ ಎಂದು ಶಿವಕುಮಾರ್ ಹೇಳಿದರು.







