ಹೊಟೇಲ್ ಮೇಲೆ ದಾಳಿ ನಡೆಸಿದ ಉಗ್ರರ ಹತ್ಯೆ: ಪಾಕಿಸ್ತಾನಿ ಅಧಿಕಾರಿಗಳು
ಕರಾಚಿ,ಮೇ.12: ಪಾಕಿಸ್ತಾನದ ಗ್ವದರ್‌ನಲ್ಲಿರುವ ಪಂಚತಾರಾ ಹೊಟೇಲ್ ಮೇಲೆ ಶನಿವಾರ ದಾಳಿ ನಡೆಸಿದ ಎಲ್ಲ ಉಗ್ರರನ್ನು ಹತ್ಯೆ ಮಾಡಿರುವುದಾಗಿ ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಉಗ್ರರು ಮತ್ತು ಭದ್ರತಾಪಡೆಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಎಷ್ಟು ಮಂದಿ ಹತರಾಗಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಡಾನ್ ಪತ್ರಿಕೆಯ ವರದಿ ಪ್ರಕಾರ, ಘಟನೆಯಲ್ಲಿ ಭದ್ರತಾ ಪಡೆಯ ಮೂವರು ಯೋಧರು ಸಾವನ್ನಪ್ಪಿದ್ದಾರೆ. ಜೊತೆಗೆ ನಾಲ್ವರು ಉಗ್ರರು ಮತ್ತು ಹೊಟೇಲ್‌ನ ಓರ್ವ ಸಿಬ್ಬಂದಿಯೂ ಸಾವನ್ನಪ್ಪಿದ್ದಾನೆ ಎಂದು ವರದಿ ತಿಳಿಸಿದೆ. ಇದೇ ವೇಳೆ, ಮೂರು ದಾಳಿಕೋರರು ಮತ್ತು ಭದ್ರತಾ ಪಡೆಯ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ವರದಿಗಳ ಪ್ರಕಾರ, ಬಲೂಚ್ ಪ್ರತ್ಯೇಕವಾದಿ ಗುಂಪು ಬಲೂಚ್ ಲಿಬರೇಶನ್ ಆರ್ಮಿ ಈ ದಾಳಿಯ ಹೊಣೆ ಹೊತ್ತಿದೆ. ಈ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರ ಭಾವಚಿತ್ರಗಳನ್ನು ಗುಂಪು ಬಿಡುಗಡೆ ಮಾಡಿದೆ. ಸದ್ಯ ಈ ಪ್ರದೇಶದ ಮೇಲೆ ಸೇನೆ ನಿಯಂತ್ರಣ ಸಾಧಿಸಿದ್ದು ಎಲ್ಲ ಉಗ್ರರನ್ನು ಹತ್ಯೆ ಮಾಡಿದೆ ಮತ್ತು ಹೊಟೇಲ್‌ನ ಎಲ್ಲ ಅತಿಥಿಗಳನ್ನು ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿದೆ.