ಉಡುಪಿ ನಗರಸಭೆಗೆ 27 ದೂರುಗಳು: ಟ್ಯಾಂಕರ್ ಮೂಲಕ ನೀರು ಸರಬರಾಜು
ಐದನೆ ವಿಭಾಗದ ಅರ್ಧ ಪ್ರದೇಶಗಳಿಗೆ ಪೂರೈಕೆಯಾಗದ ನೀರು

ಉಡುಪಿ, ಮೇ 12: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ನೀರು ಪೂರೈಕೆ ಸಂಬಂಧ ವಿಂಗಡಿಸಿರುವ ಆರು ವಿಭಾಗಗಳ ಪೈಕಿ ಇಂದು ಸರಬರಾಜು ಮಾಡ ಬೇಕಾಗಿದ್ದ ಐದನೆ ವಿಭಾಗದ ಅರ್ಧದಷ್ಟು ಪ್ರದೇಶಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಈ ಸಂಬಂಧ ಇಂದು ಬೆಳಗ್ಗೆ ಯಿಂದ ಸಂಜೆಯವರೆಗೆ ಉಡುಪಿ ನಗರಸಭೆಗೆ 27 ದೂರುಗಳು ಬಂದಿವೆ.
ಇಂದು ಐದನೆ ವಿಭಾಗದ ಉಡುಪಿಯ ಪಿಡಬ್ಲುಡಿ ವಸತಿಗೃಹ, ಕನ್ನ ರ್ಪಾಡಿ, ಬೈಲೂರು, ರಥಬೀದಿ, ಮಿಶನ್ ಕಂಪೌಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗಿದ್ದು, ಇದರಲ್ಲಿ ಅರ್ಧದಷ್ಟು ಪ್ರದೇಶಗಳಿಗೆ ನೀರು ಪೂರೈಕೆಯಾಗದೆ ಸಮಸ್ಯೆ ಉಂಟಾಯಿತು.
ಮೇ 13ರಂದು ಐದನೆ ವಿಭಾಗದಲ್ಲಿ ನೀರು ಪೂರೈಕೆಯಾಗದ ಪ್ರದೇಶ ಮತ್ತು ಆರನೆ ವಿಭಾಗದ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಅಧಿಕಾರಿ ಗಳು ಕ್ರಮ ಕೈಗೊಂಡಿದ್ದಾರೆ. ಇದರಿಂದ ಆರು ದಿನಗಳ ಹಿಂದೆ ವಿಂಗಡಿಸಿರುವ ಆರು ವಿಭಾಗಗಳ ಪೈಕಿ ಎಲ್ಲ ವಿಭಾಗಗಳಿಗೂ ಒಂದು ಸುತ್ತಿನ ನೀರು ಸರಬರಾಜು ಮಾಡಿದಂತಾಗುತ್ತದೆ. ಮೇ 14ರಿಂದ ಮತ್ತೆ ಒಂದನೆ ವಿಭಾಗದಿಂದ ನೀರು ಪೂರೈಕೆಯನ್ನು ಆರಂಭಿಸಲಾಗುವುದೆಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಹಲವೆಡೆ ಟ್ಯಾಂಕರ್ ನೀರು: ಐದನೇ ವಿಭಾಗದಲ್ಲಿ ನೀರು ಸರಿಯಾಗಿ ಪೂರೈಕೆಯಾಗದ ಪ್ರದೇಶಗಳಿಂದ ಸುಮಾರು 27 ದೂರುಗಳು ನಗರಸಭೆಗೆ ಬಂದಿದ್ದು, ನಗರಸಭೆಯಲ್ಲಿ ಕುಳಿತು ಖದ್ದು ಈ ದೂರುಗಳನ್ನು ಸ್ವೀಕರಿಸಿದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್ ಇದಕ್ಕೆ ಬೇಕಾದ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ನೀರು ಬಾರದ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಸಂತೋಷ್ ಕುಮಾರ್ ಕಲ್ಮಾಡಿ, ಮೂಡಬೆಟ್ಟು, ಇಂದ್ರಾಳಿ, ಮಂಚಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಈ ಎಲ್ಲ ಪ್ರದೇಶಗಳಿಗೆ ಸುಮಾರು ನಾಲ್ಕು ಟ್ಯಾಂಕರ್‌ಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಅದೇ ರೀತಿ ದೂರು ಬಂದ ಇತರ ಪ್ರದೇಶಗಳಿಗೆ ಈಗಾಗಲೇ ನೇಮಕ ಮಾಡಿರುವ ಅಧಿಕಾರಿಗಳು ಭೇಟಿ ನೀಡಿ, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ್ದಾರೆ.
ಬಜೆಗೆ ಜಿಲ್ಲಾಧಿಕಾರಿ ಭೇಟಿ: ಸ್ವರ್ಣ ನದಿಯ ನಾಲ್ಕು ಕಡೆಗಳಲ್ಲಿ ಇಂದು ಕೂಡ ಡ್ರೆಡ್ಜಿಂಗ್ ಮೂಲಕ ನೀರು ಹಾಯಿಸುವ ಕಾರ್ಯ ಮುಂದು ವರೆದಿದೆ. ಇದರಿಂದ ಬಜೆ ಅಣೆಕಟ್ಟಿನ ಜಾಕ್‌ವೆಲ್‌ಗೆ ನೀರು ಹರಿದು ಬರುತ್ತಿದೆ. ಸದ್ಯ ಬಜೆಯಲ್ಲಿ 1.2 ಮೀಟರ್ ನೀರಿನ ಸಂಗ್ರಹವಿದೆ. ಈ ಹಿನ್ನೆಲೆಯಲ್ಲಿ ಬಜೆಯಲ್ಲಿ ಬೆಳಗ್ಗೆ 10ಗಂಟೆಯಿಂದ ರಾತ್ರಿವರೆಗೂ ಪಂಪಿಂಗ್ ಕಾರ್ಯ ನಡೆಸಲಾಗಿದೆ.
ಈ ಸಂಬಂಧ ಉಡುಪಿ ಜಿಲ್ಲಾಧಿಕಾರಿ ಹೆಫ್ಸಿಬಾರಾಣಿ ಕೊರ್ಲಪಾಟಿ ಬಜೆ ಅಣೆಕಟ್ಟಿಗೆ ಇಂದು ಭೇಟಿ ನೀಡಿ ಪಂಪಿಂಗ್ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಡ್ರೆಡ್ಜಿಂಗ್ ನಡೆಯುತ್ತಿರುವ ಪ್ರದೇಶಗಳಿಗೂ ತೆರಳಿ ಅಗತ್ಯ ಸಲಹೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್, ನಗರಸಭೆ ಪರಿಸರ ಅಭಿಯಂತರ ರಾಘವೇಂದ್ರ ಹಾಜರಿದ್ದರು.
ಅದೇ ರೀತಿ ಬಜೆ ಅಣೆಕಟ್ಟಿನ ಬಳಿ ಉಡುಪಿ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ನಾಲ್ಕನೆ ದಿನವೂ ಶ್ರಮದಾನ ಕಾರ್ಯ ನಡೆಯಿತು. ಹೂಳೆತ್ತುವ ಕಾರ್ಯ ಹಾಗೂ ಬಂಡೆ ತೆರವುಗೊಳಿಸುವ ಮೂಲಕ ನೀರು ಹರಿದು ಹೋಗು ವಂತೆ ಮಾಡಲಾಯಿತು. ಇದರಲ್ಲಿ ನಗರಸಭೆ ಸದಸ್ಯರು ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.
ಮೇ 13ರಂದು ನೀರು ಪೂರೈಸುವ ಪ್ರದೇಶ
ಉಡುಪಿ ನಗರಸಭೆ ವ್ಯಾಪ್ತಿಯ ಬನ್ನಂಜೆ, ಮಠದಬೆಟ್ಟು, ಬನ್ನಂಜೆ ಗರಡಿ ರಸೆತಿ, ಹಳೇ ಡಿಸಿ ಕಛೇರಿ ಹಿಂಬದಿ, ಕಾಡಬೆಟ್ಟು, ಜಗನ್ನಾಥ ಮಾರ್ಗ, ಕ್ಯೊಲಾ ರೋಡ್, ಬ್ರಹ್ಮಗಿರಿ, ಗಾಂಧಿ ನಗರ, ಸಿಪಿಸಿ ಲೇಔಟ್, ಅಂಬಲಪಾಡಿ, ಕರಾವಳಿ ಬೈಪಾಸ್‌ವರೆಗೆ, ಕಾಳಿಕಾಂಬನಗರ, ಕನ್ನರ್‌ಪಾಡಿ ಪ್ರದೇಶಗಳಿಗೆ ಮೇ 13ರಂದು ನೀರು ಸರಬರಾಜು ಮಾಡಲಾಗುವುದು.
ಬೆಳಿಗ್ಗೆ ಅವಶ್ಯವಿರುವ ನೀರಿನ ಪ್ರಮಾಣ ಲಭ್ಯತೆ ಇಲ್ಲದಿದ್ದಲ್ಲಿ ಅಪರಾಹ್ನದ ನಂತರ ನೀರು ಸರಬ ರಾಜು ಮಾಡಲಾಗುವುದು ಎಂದು ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








