ಲಂಬಾಣಿ ಡ್ರೆಸ್ ಧರಿಸಿ ಶೋಭಾ ಕರಂದ್ಲಾಜೆ ಪ್ರಚಾರ

ಕಲಬುರಗಿ, ಮೇ 12: ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಪರ ಎರಡು ದಿನಗಳಿಂದ ಪ್ರಚಾರ ಕೈಗೊಂಡಿರುವ ಸಂಸದೆ ಶೋಭಾ ಕರಂದ್ಲಾಜೆ ಲಂಬಾಣಿ ಮಹಿಳೆಯರಂತೆ ಉಡುಪು ಧರಿಸಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.
ಕ್ಷೇತ್ರದ ವ್ಯಾಪ್ತಿಯ ಕೂಡ್ಲಿ ಗ್ರಾಮದಿಂದ ಪ್ರಚಾರ ಕಾರ್ಯವನ್ನು ಪ್ರಾರಂಭಿಸಿದ ಶೋಭಾ ಕರಂದ್ಲಾಜೆ ಅವರು, ಲಂಬಾಣಿ ಮಹಿಳೆಯರ ಡ್ರೆಸ್ ಧರಿಸಿ ಪ್ರಚಾರದ ವೇಳೆ ಲಂಬಾಣಿ ಮಹಿಳೆಯ ನೃತ್ಯಕ್ಕೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು ಹಾಗೂ ಎಲ್ಲರ ಗಮನ ಸೆಳೆಯಿತು.
ಅನಂತರ ಮಾತನಾಡಿದ ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಸರಕಾರ ಮೊದಲ ಬಾರಿಗೆ ಲಂಬಾಣಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿತ್ತು. ಉಮೇಶ್ ಜಾಧವ್ ಬಿಜೆಪಿ ಸೇರಿದ ಮೇಲೆ ಆನೆ ಬಲ ಬಂದಂತಾಗಿದೆ. ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದು, ನಮ್ಮ ಸಂಖ್ಯಾಬಲ 106ಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಒಳಗಿನಿಂದಲೇ ಕುಸಿದು ಹೋಗುತ್ತಿದೆ. ಸಶಕ್ತ ದೇಶ ಹಾಗೂ ಸಶಕ್ತ ಕರ್ನಾಟಕಕ್ಕೆ ಬಿಜೆಪಿಗೆ ಬೆಂಬಲಿಸುವಂತೆ ಮನವಿ ಮಾಡಿದ ಅವರು, ಚಿಂಚೋಳಿ ಕ್ಷೇತ್ರದ ಮತದಾರರು ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಬೇಕು ಎಂದು ಇದೇ ವೇಳೆ ಕೋರಿದರು.
ಪರಿಷತ್ ವಿಪಕ್ಷ ನಾಯಕ ಕೋಟಾ ಶೀನಿವಾಸ್ ಪೂಜಾರಿ, ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ 25ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಜೋಡೆತ್ತುಗಳ ನೊಗ ಕಳಚಿ ಬಿದ್ದಿದೆ. ಚಿಕಿತ್ಸೆ ನೆಪದಲ್ಲಿ ರೆಸಾರ್ಟ್ ವಾಸ್ತವ್ಯ ಮಾಡುತ್ತಿದ್ದಾರೆ. ಹೊರಗೆ ಬಂದು ಜನರ ಕಷ್ಟಕ್ಕೆ ಸ್ಪಂದಿಸಿ. ರಾಜಕೀಯ ಎಂದರೆ ವಿಶ್ರಾಂತಿ ಪಡೆಯುವ ಆಶ್ರಮ ಅಲ್ಲ. ಮಗನ ಗೆಲುವಿಗಾಗಿ ದೇಗುಲಕ್ಕೆ ಹೋಗುವ ಮುಖ್ಯಮಂತ್ರಿ ಕುಮಾರಸ್ವಾಮಿ ಜನರ ಕಷ್ಟ ಅರಿಯುವ ಕಾರ್ಯ ಮಾಡಿಲ್ಲ ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು.












