ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ: ಹಲವರಿಗೆ ನಿರಾಶೆ
ಹೊಸದಿಲ್ಲಿ ಲೋಕಸಭಾ ಚುನಾವಣೆ

ಹೊಸದಿಲ್ಲಿ, ಮೇ 12: ಕಳೆದ 32 ವರ್ಷಗಳಿಂದ ದಿಲ್ಲಿಯಲ್ಲಿ ಒಂದೇ ವಿಳಾಸದಲ್ಲಿ ವಾಸಿಸುತ್ತಿರುವ ಹೊರತಾಗಿಯೂ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾದ ಹಿನ್ನೆಲೆಯಲ್ಲಿ ಮುಹಮ್ಮದ್ ಶೌಕೀನ್ ಹಾಗೂ ಅವರ ಕುಟುಂಬದ 12 ಮಂದಿ ಸದಸ್ಯರು ಹೊಸದಿಲ್ಲಿಯಲ್ಲಿ ರವಿವಾರ ಮತದಾನ ಮಾಡಲು ಸಾಧ್ಯವಾಗಲಿಲ್ಲ.
ದಕ್ಷಿಣ ದಿಲ್ಲಿಯ ಸಂಗ್ರಾಮ್ ವಿಹಾರ್ ಡಿ ಬ್ಲಾಕ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿರುವ 68ರ ಹರೆಯದ ಮುಹಮ್ಮದ್ ಶೌಕೀನ್ ಮಾತ್ರವಲ್ಲ, ಅವರಂತೆ ಹಲವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಸಾಧ್ಯವಾಗಲಿಲ್ಲ.
‘‘ಇದು ಸ್ವೀಕಾರ್ಹವಲ್ಲ. ನಾವು ಮೂಲತಃ ಈ ಪ್ರದೇಶದ ನಿವಾಸಿಗಳು. ನಾವು ಮನೆ ಬದಲಿಸಲಿಲ್ಲ. ನಮ್ಮಲ್ಲಿ ಎಲ್ಲ ದಾಖಲೆಗಳಿವೆ. ಮತದಾನದ ಚೀಟಿ ನೀಡಲು ಯಾರೊಬ್ಬರೂ ನಮ್ಮ ಮನೆಗೆ ಬಂದಿಲ್ಲ. ನಾವು ಹಲವು ವರ್ಷಗಳಿಂದ ಮತದಾನ ಮಾಡುತ್ತಿದ್ದೇವೆ.’’ ಎಂದು ಶೌಕೀನ್ ಹೇಳಿದ್ದಾರೆ.
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಿ ಎಂದು ನನ್ನ ಕಚೇರಿ ಹಾಗೂ ನಾನು ಕಳೆದ ಆರು ತಿಂಗಳಿಂದ ಜನರಲ್ಲಿ ಹೇಳುತ್ತಿದ್ದೇನೆ ಎಂದು ದಿಲ್ಲಿಯ ಮುಖ್ಯ ಚುನಾವಣಾ ಅಧಿಕಾರಿ ರಣಬೀರ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
‘‘ಹಲವು ಜಾಗೃತಿ ಅಭಿಯಾನ ನಡೆಸಲಾಗಿದೆ. ಮತದಾನಕ್ಕಿಂತ ಮೊದಲು ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಬೇಕಿತ್ತು. ಒಂದು ವೇಳೆ ಹೆಸರು ಪಟ್ಟಿಯಲ್ಲಿ ಇಲ್ಲದೇ ಇದ್ದರೆ, ಫಾರ್ಮ್-6 ಅನ್ನು ಸಲ್ಲಿಸಬೇಕಿತ್ತು. ನಾವು ಎಪ್ರಿಲ್ 13ರ ವರೆಗೆ ಈ ಫಾರ್ಮ್ ಅನ್ನು ಸ್ವೀಕರಿಸಿದ್ದೇವೆ’’ ಎಂದು ಸಿಂಗ್ ತಿಳಿಸಿದ್ದಾರೆ.
ಖಾಸಗಿ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ತುಘ್ಲಕಾಬಾದ್ ಎಕ್ಸಟೆನ್ಸನ್‌ನ ನಿವಾಸಿ 39ರ ಹರೆಯದ ಸಂಜಯ್ ಕುಮಾರ್ ಕೂಡ ಮತದಾನ ಮಾಡದೇ ಇರುವುದಕ್ಕೆ ವಿಷಣ್ಣರಾಗಿದ್ದಾರೆ.