ಬೇಸಿಗೆ ಶಿಬಿರದಲ್ಲಿ ಚಿಣ್ಣರ ಜಾದೂ: ಮಸ್ತ್ ಮಜಾ ಮಾಡಿದ ಪುಟಾಣಿಗಳು
ಬೆಂಗಳೂರು, ಮೇ.12: ಬಾಲ ಭವನವು 5 ರಿಂದ 16 ವರ್ಷದ ಮಕ್ಕಳಿಗೆ ಕಳೆದ ಎಪ್ರಿಲ್ 12 ರಿಂದ ಮಾರ್ಚ್ 12ರವರೆಗೆ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿತ್ತು. ಮಕ್ಕಳಿಗೆ ಸೃಜನಾತ್ಮಕ ಹಾಗೂ ಕ್ರೀಡೆ ಅಥವಾ ಸಾಹಸ ಚಟುವಟಿಕೆಗಳಾದ ಚಿತ್ರಕಲೆ, ಕರಕುಶಲೆ, ಜೇಡಿಮಣ್ಣಿನ ಕಲೆ, ಸುಗಮ ಸಂಗೀತ, ಗಿಟಾರ್, ತಬಲ, ಗಿಟಾರ್, ರಂಗ ತರಬೇತಿ, ಚೆಸ್, ಕೇರಂ ಬೋರ್ಡ್, ಫೋಟೋಗ್ರಾಫಿ, ಯೋಗ, ಕರಾಟೆ, ಸಾಹಸ ಕ್ರೀಡೆ ಇತ್ಯಾದಿಗಳಲ್ಲಿ ತರಬೇತಿ ನೀಡಲಾಗಿದೆ.
ಕೇಂದ್ರ ಬಾಲ ಭವನ, ಕಬ್ಬನ್ ಉದ್ಯಾನವನ ಮತ್ತು ರಾಜಾಜಿನಗರ ಮಿನಿ ಬಾಲ ಭವನಗಳಲ್ಲಿ ಬೇಸಿಗೆ ಶಿಬಿರವನ್ನು ನಡೆಸಲಾಗಿತ್ತು. ಈ ಬಾರಿ ಸುಮಾರು 300 ಕ್ಕೂ ಹೆಚ್ಚು ಮಕ್ಕಳು ಪ್ರವೇಶ ಪಡೆದಿದ್ದು, ಶಿಬಿರದಲ್ಲಿ ನುರಿತ ಬೋಧಕರಿಂದ ಮಕ್ಕಳಿಗೆ ಚಟುವಟಿಕೆಗಳನ್ನು ನಡೆಸಲಾಗಿತ್ತು.
ಪೂರ್ಣ ದಿನದ ಹಾಗೂ ಅರ್ಧ ದಿನದ ಪ್ಯಾಕೇಜ್ ಶಿಬಿರದಲ್ಲಿ ಪ್ರತಿ ಶನಿವಾರದಂದು ಈ ಬಾರಿ ವಿಶೇಷವಾಗಿ ದೇಸಿ ಆಟಗಳು, ಫಜಲ್, ತಾಯಂದಿರ ದಿನಾಚರಣೆ ಪ್ರಯುಕ್ತ, ಪತ್ರ ಸಂಸ್ಕೃತಿ ಚಟುವಟಿಕೆ, ಬಾಲ ಪಾಕ ಶಾಲೆ ಇತ್ಯಾದಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮನರಂಜನೆಗಾಗಿ ಚಿಣ್ಣರ ಅಚ್ಚು ಮೆಚ್ಚಿನ ಪುಟಾಣಿ ರೈಲು ವಿಹಾರ ಒದಗಿಸಲಾಗಿತ್ತು.
ಯುವಜನ ಕ್ರೀಡಾ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ ಈ ಬಾರಿ ಕ್ರೀಡೆ ಮತ್ತು ಸಾಹಸ ಚಟುವಟಿಕೆಗಳನೂ, ಏರ್ಪಡಿಸಲಾಗಿತ್ತು. ಇದರೊಂದಿಗೆ ಒಂದು ದಿನದ ಚಾರಣವನ್ನು ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿತ್ತು, ಮಕ್ಕಳಿಗೆ ಜಾನಪದ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾನಪದ ಲೋಕಕ್ಕೂ ಕರೆದೊಯ್ಯಲಾಗಿತ್ತು.
ಇಂದು ಕೊನೆಯ ದಿನವಾದ ಹಿನ್ನೆಲೆ, ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಾ.ಇಂಧುಮತಿ ರಾವ್, ಕಾರ್ಯದರ್ಶಿ ರತ್ನ ಕಲಮದಾನಿ, ಆಡಳಿತಾಧಿಕಾರಿ ಎಲ್.ಎಂ.ಪ್ರಭ ಉದ್ಘಾಟನೆ ಮಾಡಿದರು. ಶಿಬಿರದಲ್ಲಿ ಮಕ್ಕಳು ಮಾಡಿದ ಎಲ್ಲ ಚಿತ್ರಕಲೆಯನ್ನ ಪ್ರದರ್ಶನಕ್ಕೆ ಇಡಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಬೇಸಿಗೆ ಶಿಬಿರಕ್ಕೆ ಅದ್ಧೂರಿ ತೆರೆ ಎಳೆಯಲಾಯಿತು.







