ಆಧಾರ್ ಕಾರ್ಡ್‌ಗಾಗಿ ನಿತ್ಯ ಜಾಗರಣೆ: ಹೈರಾಣಾಗಿ ಹೋದ ಜನತೆ

ಬೆಂಗಳೂರು, ಎ.12: ನಮ್ಮ ದೇಶದಲ್ಲಿ ಆಧಾರ್ ಕಾರ್ಡ್ ವ್ಯವಸ್ಥೆ ಪ್ರಾರಂಭವಾದ ಮೇಲೆ ಜನಸಾಮಾನ್ಯರಿಗೆ ಸಾಕಷ್ಟು ಅನುಕೂಲವಾಗಿದೆ. ಆದರೆ, ಆಧಾರ್ ಕಾರ್ಡ್ ಮಾಡಿಸಿಕೊಳ್ಳುವಷ್ಟರಲ್ಲಿ ಜನರು ಹೈರಾಣಾಗಿ ಹೋಗುತ್ತಿದ್ದಾರೆ. ಆಧಾರ್ ಕಾರ್ಡ್ ಸೇವೆ ಆರಂಭವಾಗಿ ವರ್ಷಗಳೇ ಕಳೆದರೂ ಇನ್ನು ಸರಿಯಾಗಿ ಜನರಿಗೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವಂತಹ ಸೂಕ್ತ ವ್ಯವಸ್ಥೆ ಸಿಗುತ್ತಿಲ್ಲ.
ಜನರ ಪರದಾಟ: ಜನರು ಆಧಾರ್ ಕಾರ್ಡ್ ಪಡೆಯುವುದಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳ ಜನರು ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ಬರುತ್ತಾರೆ. ಆದರೆ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಕುಳಿತುಕೊಳ್ಳಲು ಆಸನಗಳಿಲ್ಲದೆ, ಕುಡಿಯಲು ನೀರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಉದ್ಭವಾಗಿದೆ. ಆಧಾರ್ ಕಾರ್ಡ್ ಎಲ್ಲೆಡೆ ಕಡ್ಡಾಯವಾದ ಮೇಲೆ ಪ್ರತಿಯೊಬ್ಬರು ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಆದರೆ ಆಧಾರ್ ಕಾರ್ಡ್ ವಿತರಣಾ ಕೇಂದ್ರಗಳಲ್ಲಿ ಸರಕಾರ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಬೆಳಗ್ಗೆಯಿಂದ ಸಂಜೆಯವರೆಗೆ ಸರತಿ ಸಾಲಿನಲ್ಲಿ ನಿಂತಿದ್ದರೂ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಧಾರ್ ಕಾರ್ಡ್ ಮಾಡಿಸಿಕೊಳ್ಳುವುದು ಜನಸಾಮಾನ್ಯರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಸರಕಾರ ಕೆಲವೊಂದು ಬ್ಯಾಂಕ್‌ಗಳನ್ನು ಆಯ್ಕೆ ಮಾಡಿದ್ದು, ಅಂತಹ ಬ್ಯಾಂಕುಗಳಲ್ಲಿ ಸಾರ್ವಜನಿಕರು ಆಧಾರ್ ಕಾರ್ಡ್ ಅನ್ನು ಮಾಡಿಸಿಕೊಳ್ಳಬಹುದಾಗಿದೆ. ಆದರೆ ಅಂತಹ ಬ್ಯಾಂಕ್‌ಗಳಲ್ಲಿ ದಿನಕ್ಕೆ 20 ಟೋಕನ್ ನೀಡುತ್ತಾರೆ. ಅದಕ್ಕೂ ಬೆಳಗಿನ ಜಾವ ಹೋಗಿ ಸರತಿ ಸಾಲಿನಲ್ಲಿ ನಿಲ್ಲಬೇಕು. ಯಾರೂ ಬೇಗ ಬಂದು ಸರತಿ ಸಾಲಿನಲ್ಲಿ ನಿಲ್ಲುತ್ತಾರೋ ಅವರಿಗೆ ಮಾತ್ರ ಆಧಾರ್ ಕಾರ್ಡ್ ಸಿಗುತ್ತದೆ.
ಇದರ ಜೊತೆಯಲ್ಲಿ ವಸೂಲಿ ಕೂಡ ನಡೆಯುತ್ತಿದೆ. ಇದರಿಂದ ಸಾರ್ವಜನಿಕರು ಆಧಾರ್ ಕಾರ್ಡ್ ಮಾಡಿಸಿಕೊಳ್ಳಲಾಗದೆ ಮನೆಗೆ ವಾಪಾಸ್ ಆಗುವಂತ ಸ್ಥಿತಿ ನಿರ್ಮಾಣವಾಗಿದೆ. ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ ಸೇರಿದಂತೆ 40 ರಿಂದ 50 ಕಿ.ಮೀಟರ್ ದೂರದಿಂದ ಕೆಲಸ ಕಾರ್ಯ ಬಿಟ್ಟು ಜನರು ಆಧಾರ್ ಕಾರ್ಡ್‌ಗಾಗಿ ಜಿಲ್ಲಾ ಕಚೇರಿಗೆ ಬರುತ್ತಾರೆ. ಎಷ್ಟು ದೂರದಿಂದ ಬಂದರು ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಜನರಿಂದ ಸಾಧ್ಯವಾಗುತ್ತಿಲ್ಲ.
ಏತನ್ಮಧ್ಯೆ ಆಧಾರ್ ಕಾರ್ಡ್ ಮಾಡಿಸುವಾಗ ಕಂಪ್ಯೂಟರ್ ಆಪರೇಟರ್‌ಗಳು ಸರ್ವರ್ ಸಮಸ್ಯೆ ಇದೆ ಹೇಳಿ 10 ರಿಂದ 20 ಆಧಾರ್ ಕಾರ್ಡ್‌ಗಳನ್ನು ಮಾತ್ರ ನೀಡುತ್ತಾರೆ. ಒಂದು ಆಧಾರ್ ಕಾರ್ಡ್ ಮಾಡಿಸಲು ನಾಲ್ಕೈದು ದಿನ ಬರಬೇಕು ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡರು.
ಒಟ್ಟಿನಲ್ಲಿ ಸರಕಾರ ಜನರ ಅನುಕೂಲಕ್ಕಾಗಿ ಆಧಾರ್ ಕಾರ್ಡ್ ಅನ್ನು ಜಾರಿಗೆ ತಂದಿದೆ. ಆದರೆ ಆಧಾರ್ ಕಾರ್ಡ್ ಅನ್ನು ಜನರು ಮಾಡಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡುವಲ್ಲಿ ಸರಕಾರ ಎಡವಿದೆ. ಆಧಾರ್ ಕಾರ್ಡ್‌ಗಾಗಿ ಸಾರ್ವಜನಿಕರು ಪ್ರತಿದಿನ ಪರದಾಡುವಂತ ಸ್ಥಿತಿ ಎಲ್ಲ ಕಡೆ ನಿರ್ಮಾಣವಾಗಿದೆ. ಇದರ ಕಡೆ ಸರಕಾರ ಗಮನ ಹರಿಸಿ ಜನರಿಗೆ ತೊಂದರೆಯಾಗದಂತೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳು ವ್ಯವಸ್ಥೆ ಮಾಡಬೇಕಿದೆ.







