ಕವಿಗಳಿಗೆ ಕಾವ್ಯದ ಬಗ್ಗೆ ಪ್ರೀತಿ ಇರಲಿ: ಡಾ.ಎಚ್.ಎಸ್.ವೆಂಕಟೇಶ ಮೂರ್ತಿ

ಬೆಂಗಳೂರು, ಮೇ.12: ಕವಿಗಳಿಗೆ ಕಾವ್ಯದ ಬಗ್ಗೆ ಪ್ರೀತಿ ಇರಬೇಕು ಎಂದು ಸಾಹಿತಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಹೇಳಿದರು.
ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆರ್.ಎಸ್.ಮಲ್ಲಾರಿರಾವ್ ಅವರ ಸೌಹಾರ್ದ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕವಿಗೆ ಕಾವ್ಯದ ಬಗ್ಗೆ ಪ್ರೀತಿ ಇದ್ದರೆ ಮಾತ್ರ ಉತ್ತಮ ಕಾವ್ಯ ರಚನೆ ಸಾಧ್ಯ. ಆದ್ದರಿಂದ ಯುವ ಕವಿಗಳು ಕಾವ್ಯದ ಬಗ್ಗೆ ಪ್ರೀತಿ ಬೆಳಸಿಕೊಳ್ಳಬೇಕು. ಸ್ನೇಹಿತರೊಂದಿಗೆ ಸೇರಿ ಸಂಗೀತ, ಚರ್ಚೆಯಲ್ಲಿ ಭಾಗವಹಿಸುವವನೇ ಮನುಷ್ಯ. ಮಲ್ಲಾರಿರಾವ್ ಅವರ ಸೌಹಾರ್ದ ಪುಸ್ತಕ ಸ್ನೇಹ -ಸಂಬಂಧಗಳ ಬಗ್ಗೆ ತಿಳಿಸಿದೆ ಎಂದರು.
ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ಮಾತನಾಡಿ, ಇತ್ತೀಚಿನ ಕವಿಗಳು ಭಾಷೆ ಬಂದರೆ ಸಾಕು ಕವಿತೆ ರಚಿಸಬಹುದು ಎಂದು ತಿಳಿದಿದ್ದಾರೆ. ಆದರೆ ಅದು ತಪ್ಪು. ಕವಿತೆ ರಚನೆಗೆ ಭಾಷೆ ಮಾತ್ರವಲ್ಲದೇ ಪದಗಳ ಜೋಡಣೆ, ಶ್ರದ್ಧೆ, ಪರಿಶ್ರಮ ಮುಖ್ಯ. ಕವಿಗಳಿಗೆ ಸಾಹಿತ್ಯ ಒಲಿಯುವುದು ಸುಲಭವಲ್ಲ. ಅದಕ್ಕೆ ಕಠಿಣ ಪರಿಶ್ರಮ ಬೇಕು. ಸಾಹಿತ್ಯ ಒಂದು ಕಲೆಯಾಗಿದ್ದು, ಸಾಹಿತಿ ತನ್ನ ಮುಂದಿನ ಪರಂಪರೆಗೆ ಸಾಹಿತ್ಯ ನೀಡಲು ಆಗುವುದಿಲ್ಲ. ಸಾಹಿತ್ಯಾಸಕ್ತಿರಿಗೆ ಮಾತ್ರ ಸಾಹಿತ್ಯ ಒಲಿಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಾವ್ಯ ದಿನೇಶ್ ಅವರು ಗೀತಗಾಯನ ನಡೆಸಿಕೊಟ್ಟರು. ಭಾರ್ಗವ ರಾವ್ (ಕೊಳಲು), ಶ್ರೀವತ್ಸ ಕೌಲಗಿ (ತಬಲ) ಸಹಕಾರ ನೀಡಿದರು.
.jpg)







