ರಶ್ಯಾದ ಎಸ್-400ಗೆ ಬದಲಾಗಿ ಥಾಡ್ ರಕ್ಷಣಾ ವ್ಯವಸ್ಥೆ: ಭಾರತಕ್ಕೆ ಅಮೆರಿಕದ ಪ್ರಸ್ತಾವ

ವಾಶಿಂಗ್ಟನ್,ಮೇ.12: ರಶ್ಯಾದ ಎಸ್-400 ಕ್ಷಿಪಣಿವಾಹಕಗಳ ಬದಲಾಗಿ ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯ ಡಿಫೆನ್ಸ್ (ಥಾಡ್) ಮತ್ತು ಪ್ಯಾಟ್ರಿಯಾಟ್ ಸುಧಾರಿತ ಸಾಮರ್ಥ್ಯದ (ಪಿಎಸಿ-3) ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭಾರತಕ್ಕೆ ಮಾರಾಟ ಮಾಡುವ ಪ್ರಸ್ತಾವವನ್ನು ಅಮೆರಿಕ ಭಾರತದ ಮುಂದಿಟ್ಟಿದೆ. ಕೆಲವು ವಾರಗಳ ಹಿಂದೆ ಈ ಪ್ರಸ್ತಾವ ಮಾಡಿರುವ ಅಮೆರಿಕ, ಭಾರತ ರಶ್ಯಾದಿಂದ ಯುದ್ಧ ವ್ಯವಸ್ಥೆಯನ್ನು ಖರೀದಿಸುತ್ತಿರುವುದರ ಮೇಲೆ ಯಾವುದೇ ನಿರ್ಬಂಧ ಹೇರುವುದಿಲ್ಲ ಎಂದು ಪುನರುಚ್ಚರಿಸಿದೆ.
2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿದೆ ಎಂಬ ಕಾರಣಕ್ಕೆ ಸದ್ಯ ಅಮೆರಿಕ ರಶ್ಯಾದ ಮೇಲೆ ಹಲವು ನಿರ್ಬಂಧಗಳನ್ನು ಹೇರಿದೆ. ಭಾರತ ರಶ್ಯಾದಿಂದ ಎಸ್-400 ಖರೀದಿಸುವುದರ ಮೇಲೆ ಯಾವುದೇ ನಿರ್ಬಂಧ ಹೇರಲು ಅಮೆರಿಕ ಬಯಸುವುದಿಲ್ಲ ಎನ್ನುವುದನ್ನು ಅಮೆರಿಕದ ಅಧಿಕಾರಿಗಳು ಕಳೆದ ಸೆಪ್ಟೆಂಬರ್‌ನಲ್ಲಿ ಹೊಸದಿಲ್ಲಿಯಲ್ಲಿ ನಡೆದ ಉಭಯ ರಾಷ್ಟ್ರಗಳ ರಕ್ಷಣಾ ಮಂತ್ರಿಗಳ ನಡುವೆ ನಡೆದ ಮಾತುಕತೆ ವೇಳೆಯೇ ತಿಳಿಸಿದ್ದರು. ಥಾಡ್ ರಕ್ಷಣಾ ವ್ಯವಸ್ಥೆಯ ನಿಖರ ದರ ದೃಢಪಟ್ಟಿಲ್ಲ. ಆದರೆ ಸಿಎನ್‌ಬಿಸಿ ವರದಿಯ ಪ್ರಕಾರ, ಒಂದು ಥಾಡ್ ವಿಭಾಗ ಅಂದಾಜು ಮೂರು ಬಿಲಿಯನ್ ಡಾಲರ್ ಬೆಲೆಬಾಳುತ್ತದೆ. ಅಮೆರಿಕದಿಂದ 44 ಥಾಡ್ ವಾಹಕಗಳು ಮತ್ತು ಕ್ಷಿಪಣಿಗಳನ್ನು ಖರೀದಿಸುವ ಒಪ್ಪಂದಕ್ಕೆ ಸೌದಿ ಅರೇಬಿಯ ಕಳೆದ ನವೆಂಬರ್‌ನಲ್ಲಿ ಸಹಿ ಹಾಕಿತ್ತು. ಇದೇ ವೇಳೆ ಭಾರತ ಐದು ಎಸ್-400ಗೆ 5.4 ಬಿಲಿಯನ್ ಡಾಲರ್ ನೀಡುತ್ತಿದೆ.





