ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚು ಹತ್ತಿಸಿದ ಚೇತನ ಅ.ನ.ಕೃ: ವಿಮರ್ಶಕ ಆ.ರಾ.ಮಿತ್ರ

ಬೆಂಗಳೂರು, ಮೇ 12: ಕನ್ನಡದ ಸಾಕ್ಷಿ ಪ್ರಜ್ಞೆಯಾಗಿರುವ ಅ.ನ.ಕೃ ಅವರು ಕನ್ನಡಿಗರ ಹೃದಯದಲ್ಲಿ ಸ್ವಾಭಿಮಾನದ ಕಿಚ್ಚು ಹಬ್ಬಿಸುವ ಮೂಲಕ ನಾಡು-ನುಡಿಗಾಗಿ ಶ್ರಮಿಸಿದರು ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರ ಹೆಮ್ಮರವಾಗಿ ಬೆಳೆಯಲು ಬುನಾದಿ ಹಾಕಿದ ಚೇತನನಾಗಿದ್ದಾರೆ ಎಂದು ವಿಮರ್ಶಕ ಆ.ರಾ.ಮಿತ್ರ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಅ.ನ.ಕೃ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅ.ನ.ಕೃ ಅವರು ಇಡೀ ಸಮುದಾಯದ ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆ. ಅಲ್ಲದೆ, ಕನ್ನಡ ಸಾಹಿತ್ಯದ ಓದುಗರನ್ನು ಉತ್ತೇಜಿಸಿದ ಅನನ್ಯ ವ್ಯಕ್ತಿಯಾಗಿದ್ದಾರೆ. ಆದರೆ, ಇಂದಿನ ದಿನಗಳಲ್ಲಿ ಕನ್ನಡಿಗರಲ್ಲಿ ಭಾಷೆಯ ಸ್ವಾಭಿಮಾನವೇ ಇಲ್ಲದಂತಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ನಾಡು-ನುಡಿಗಾಗಿ ರಾಜ್ಯದುದ್ದಕ್ಕೂ ಸಂಚಾರ ಮಾಡುತ್ತಿದ್ದ ಅವರನ್ನು ಸಂಚಾರಿ ಸಾಹಿತಿ ಎಂದೇ ಕರೆಯುತ್ತಿದ್ದರು ಎಂದ ಅವರು, ವಚನಗಳು, ಕನ್ನಡ ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಅನೇಕ ವಿಚಾರಗಳನ್ನು ನೆನಪಿನಲ್ಲಿಟ್ಟುಕೊಂಡು ಮಾತನಾಡುತ್ತಿದ್ದರು. ಅ.ನ.ಕೃ ಅವರ ಉಪನ್ಯಾಸ ಕೇಳುವ ಸಂದರ್ಭದಲ್ಲಿ ಹೊಸದೊಂದು ಲೋಕವೊಂದು ಕಾಣಿಸುತ್ತದೆ. ಪ್ರಪಂಚದ ಜತೆಗೆ ಸಂಬಂಧವನ್ನಿಟ್ಟುಕೊಂಡಿದ್ದ ಮಹಾನ್ ಚೇತನರಾಗಿದ್ದಾರೆ ಎಂದು ಬಣ್ಣಿಸಿದರು.
ಅ.ನ.ಕೃ ಶಿಷ್ಯರಾದ ಶಾಮಂ ಕೃಷ್ಣರಾಯರು ಗುರುಗಳ ಸಾಹಿತ್ಯ ಸೇವೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಕರ್ನಾಟಕ, ಮುಂಬೈ, ಹೈದರಾಬಾದ್ ಸೇರಿದಂತೆ ಹಲವು ಕಡೆಗಳಲ್ಲಿ ನಿರಂತರವಾಗಿ ಸಂಚಾರ ಮಾಡುತ್ತಾ, ಕನ್ನಡ ಸಾಹಿತ್ಯವನ್ನು ಪ್ರಸರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಶ್ಯಾಮಂ ಕೃಷ್ಣರಾಯರು ಗೋವಾದಲ್ಲಿ ನೆಲೆಸಿ ಕನ್ನಡ ಭಾಷೆ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡು ಕರ್ನಾಟಕ ಹಾಗೂ ಗೋವಾದ ನಡುವೆ ಸೇತುವೆಯಾಗಿ ಹಲವು ಬಾರಿ ಕಾರ್ಯ ನಿರ್ವಹಿಸಿದ್ದಾರೆ. ಅದರ ಜತೆಗೆ, 80 ಕ್ಕೂ ಅಧಿಕ ಪುಸ್ತಕಗಳನ್ನು ಬರೆದು, ಕನ್ನಡ ಸಾಹಿತ್ಯ ಲೋಕಕ್ಕೂ ಅಪಾರವಾದ ಕೊಡುಗೆ ನೀಡಿದ್ದಾರೆ. ಸೃಜನಾತ್ಮಕ ವ್ಯಕ್ತಿಯಾಗಿದ್ದಾರೆ ಎಂದರು.
ಅ.ನ.ಕೃ ತನ್ನ ಜತೆಗಿದ್ದವರನ್ನು ಬೆಳೆಸಲು ಪ್ರಯತ್ನಿಸುತ್ತಿದ್ದರು. ಅವರೇ ನನಗೆ ಲೇಖನಗಳನ್ನು ಬರೆಯಲು ಪ್ರೇರಕರಾಗಿದ್ದಾರೆ. ನೀನು ಲೇಖನ ಬರೆಯಬೇಕು ಎಂದು ಪ್ರಚೋದಿಸುತ್ತಿದ್ದ ಅವರು, ನಾನೇ ಪ್ರಕಟಿಸುತ್ತೇನೆ ಎಂದು ಭರವಸೆ ನೀಡುತ್ತಿದ್ದರು. ಅಂತಹ ವ್ಯಕ್ತಿತ್ವವುಳ್ಳ ವ್ಯಕ್ತಿಗಳು ಇಂದಿನ ದಿನಗಳಲ್ಲಿ ಕಾಣಸಿಗುವುದಿಲ್ಲ ಎಂದು ಆ.ರಾ.ಮಿತ್ರ ಬೇಸರ ವ್ಯಕ್ತಪಡಿಸಿದರು.
ಸಾಹಿತಿ ಪ್ರೊ.ಅಶ್ವತ್ ನಾರಾಯಣ ಮಾತನಾಡಿ, ಶ್ಯಾಮಂ ಕೃಷ್ಣಮೂರ್ತಿ ಅಂತಹ ಶಿಕ್ಷಕರು ಮತ್ತೊಬ್ಬರು ಸಿಗಲು ಸಾಧ್ಯವಿಲ್ಲ. ವರ್ಷದ ಎಲ್ಲ ದಿನಗಳಲ್ಲಿಯೂ ಶಾಲೆಗಳಿಗೆ ಕಡ್ಡಾಯವಾಗಿ ಬರುತ್ತಿದ್ದ ಶಿಕ್ಷಕರಾಗಿದ್ದರ ಎಂದ ಅವರು, ಕನ್ನಡ ಸಾಹಿತ್ಯ ಲೋಕದಲ್ಲಿ ಸಾಧನೆ ಮಾಡಿದವರು ಅನೇಕರಿದ್ದಾರೆ. ಆದರೆ, ಅ.ನ.ಕೃ ಅಂತೆ ಸಾಧಿಸಿದವರು ಸಿಗುವುದಿಲ್ಲ ಎಂದು ನುಡಿದರು.
ಅ.ನ.ಕೃ ರಾಜ್ಯದಲ್ಲಿ 16 ಕ್ಕೂ ಅಧಿಕ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸಿದರು. ಅಲ್ಲದೆ, ಅವುಗಳ ಮೂಲಕ ಕನ್ನಡ ಸಾಹಿತ್ಯ ಅಭಿವೃದ್ಧಿಗೆ ಶ್ರಮಿಸಿದರು. ಅದನ್ನು ಅವರ ಶಿಷ್ಯರಾದ ಶಾಮಂ ಕೃಷ್ಣರಾಯರು ಕನ್ನಡ ನಾಡು-ನುಡಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೀಚಿ, ಬಿ.ಎಂ.ಶ್ರೀ, ಚಿದಾನಂದಮೂರ್ತಿ ಸೇರಿದಂತೆ ಅನೇಕರನ್ನು ಈ ವೇದಿಕೆ ಮೂಲಕ ಸನ್ಮಾನಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಶ್ಯಾಮಂ ಕೃಷ್ಣರಾಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ವೇಳೆ ಪತ್ರಕತ್ರ ವಿಶ್ವೇಶ್ವರ ಭಟ್, ಅಶೋಕ್ ಹಾರನಹಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.






.jpg)
.jpg)

