ಮಂಗಳೂರು: ಮೇ 16ರವರೆಗೆ ನೀರು ಪೂರೈಕೆ ಇಲ್ಲ
ಮಂಗಳೂರು, ಮೇ 13: ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕಡಿಮೆಯಾದ ಕಾರಣ ನಗರಕ್ಕೆ ನೀರು ಪೂರೈಕೆಗಾಗಿ ಸದ್ಯ ಜಾರಿಯಲ್ಲಿರುವ ರೇಶನಿಂಗ್ ನಿಯಮ ರವಿವಾರದಿಂದ ಪರಿಷ್ಕರಿಸಲಾಗಿದೆ. ಅದರಂತೆ ಸೋಮವಾರ ಬೆಳಗ್ಗೆ 6ರಿಂದ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದ್ದು, ಮೇ 16ರ ಬೆಳಗ್ಗೆ 6ರವರೆಗೂ ಇದು ಮುಂದುವರಿಯಲಿದೆ.
ಈ ಹಿಂದೆ ನಾಲ್ಕು ದಿನ ನೀರು ಪೂರೈಕೆ ಮತ್ತು ಎರಡು ದಿನ ಸ್ಥಗಿತ ಪ್ರಕ್ರಿಯೆಯು ಚಾಲ್ತಿಯಲ್ಲಿತ್ತು. ತುಂಬೆ ಅಣೆಕಟ್ಟಿನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಇಳಿಯುತ್ತಿರುವುದರಿಂದ ಮೇ 13ರಿಂದ ರೇಷನಿಂಗ್ ನಿಯಮ ಪರಿಸ್ಕರಣೆಗೊಂಡಿದೆ. ಅಂದರೆ ನಾಲ್ಕು ದಿನ ನೀರು ಪೂರೈಕೆ ಹಾಗೂ ಮೂರು ದಿನ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.
ಮೇ 9ರಿಂದ ಆರಂಭಗೊಂಡಿರುವ ನೀರು ಪೂರೈಕೆ ಮೇ 13ರ ಬೆಳಗ್ಗೆ 6ರವರೆಗೆ ಮುಂದುವರಿದಿತ್ತು. ಪರಿಷ್ಕರಣೆಯ ಹಿನ್ನಲೆಯಲ್ಲಿ ಮೇ 16ರ ಬೆಳಗ್ಗೆ 6ರವರೆಗೆ ನೀರು ಸ್ಥಗಿತಗೊಳ್ಳಲಿದೆ. ಮೇ 16ರ ಬೆಳಗ್ಗೆ 6ರಿಂದ ಮೇ 20ರವರೆಗೆ ನೀರು ಸರಬರಾಜು ಆಗಲಿದೆ. ಮೇ 20ರ ಬೆಳಗ್ಗೆ 6ರಿಂದ ಮೇ 24ರ ಬೆಳಗ್ಗೆ 6ರವರೆಗೆ ನೀರು ಸ್ಥಗಿತಗೊಳ್ಳಲಿದೆ. ಮೇ 24 ಬೆಳಗ್ಗೆ 6ರಿಂದ ಮೇ 28ರವರೆಗೆ ನೀರು ಪೂರೈಕೆ ಆಗಲಿದ್ದು, ಮೇ 28ರಿಂದ ಜೂ.1ರವರೆಗೆ ನೀರು ಕಡಿತಗೊಳ್ಳಲಿದೆ ಎಂದು ಮನಪಾ ಪ್ರಕಟನೆ ತಿಳಿಸಿದೆ.
ತುಂಬೆ ಅಣೆಕಟ್ಟಿನಲ್ಲಿ ರವಿವಾರ ಬೆಳಗ್ಗೆ ನೀರಿನ ಮಟ್ಟ 3.97 ಮೀ. ಇದ್ದುದು ಸಂಜೆ ವೇಳೆಗೆ 3.94 ಮೀ ಗೆ ಇಳಿದಿದೆ. ಶನಿವಾರ ಬೆಳಗ್ಗೆ 4.12 ಮೀ. ಇದ್ದ ನೀರಿನ ಮಟ್ಟ ಸಂಜೆಗೆ 4 ಮೀ.ಗೆ ಇಳಿದಿತ್ತು. ಅಣೆಕಟ್ಟಿನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಈ ರೀತಿ ಮುಂದುವರಿದರೆ ನಗರಕ್ಕೆ ನೀರು ಪೂರೈಕೆ ಮತ್ತಷ್ಟು ಕಠಿಣವಾಗುವ ಸಾಧ್ಯತೆ ಇರುವ ಕಾರಣ ರೇಶನಿಂಗ್ ವ್ಯವಸ್ಥೆಯಲ್ಲಿ ಪರಿಷ್ಕರಣೆ ಮಾಡಲಾಗಿದೆ. ಹಾಗಾಗಿ ಸಾರ್ವಜನಿಕರು ಮನೆಗಳಲ್ಲಿ ತೋಟ, ವಾಹನ ತೊಳೆಯಲು ಕುಡಿಯುವ ನೀರನ್ನು ಬಳಸದಂತೆ ಮನಪಾ ಅಧಿಕಾರಿಗಳು ಮನವಿ ಮಾಡಿದ್ದಾರೆ.
ನೀರಿನ ಕೊರತೆ ಎದುರಾದ ಹಿನ್ನಲೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 10 ವಾರ್ಡ್‌ಗಳಲ್ಲಿ 11 ಬೋರ್‌ವೆಲ್‌ಗಳನ್ನು ಕೊರೆಯಲು ನಿರ್ಧರಿಸಲಾಗಿದೆ. ಬೋರ್‌ವೆಲ್, ಪಂಪ್, ಸಬ್ ಮರ್ಸಿಬಲ್ ಕೇಬಲ್, ಪ್ಯಾನಲ್ ಬೋರ್ಡ್ ಎಲ್ಲ ಸೇರಿ 11 ಬೋರ್‌ವೆಲ್‌ಗಳಿಗೆ 64.68 ಲಕ್ಷ ರೂ. ಖರ್ಚು ಅಂದಾಜಿಸಲಾಗಿದೆ.
ಸದ್ಯ ನೀರಿನ ಸಮಸ್ಯೆ ಹೆಚ್ಚಿರುವ ಸುರತ್ಕಲ್ ಪೂರ್ವ, ಕಾಟಿಪಳ್ಳ ಪೂರ್ವ, ಕಾಟಿಪಳ್ಳ ಕೃಷಾಪುರ, ಇಡ್ಯಾಪೂರ್ವ, ಇಡ್ಯಾ ಪಶ್ಚಿಮ, ಪಚ್ಚನಾಡಿ, ದೇರಬೈಲ್ ಪೂರ್ವ, ಪದವು ಪೂರ್ವ, ಅಳಪೆ-2, ಜಪ್ಪಿನಮೊಗರು ವಾರ್ಡ್‌ಗಳಲ್ಲಿ ಹೊಸ ಬೋರ್‌ವೆಲ್‌ಗಳನ್ನು ಕೊರೆಯುವ ಪ್ರಸ್ತಾಪ ಇದೆ.







