ಉಡುಪಿ: 6 ವಿಭಾಗಗಳಾಗಿ ವಿಂಗಡಿಸಿ ನೀರು ಪೂರೈಸಿದರೂ ತೀರದ ಬವಣೆ
ಮುಂದುವರೆದ ನೀರಿನ ಸಮಸ್ಯೆ: ಮತ್ತೆ ಒಂದನೆ ವಿಭಾಗಕ್ಕೆ ನೀರು

ಉಡುಪಿ, ಮೇ 13: ಉಡುಪಿ ನಗರಸಭಾ ವ್ಯಾಪ್ತಿಯನ್ನು ಆರು ವಿಭಾಗ ಗಳಾಗಿ ವಿಂಗಡಿಸಿರುವ ಪ್ರದೇಶಗಳಿಗೆ ಕಳೆದ ಆರು ದಿನಗಳಿಂದ ನಿಗದಿಪಡಿಸಿ ದಂತೆ ನೀರು ಪೂರೈಕೆ ಮಾಡಲಾಗಿದ್ದು, ಇಂದಿಗೆ ಒಂದು ಸುತ್ತು ಪೂರ್ಣ ಗೊಂಡಿದೆ. ಆದರೂ ನೀರಿನ ಸಮಸ್ಯೆ ಮಾತ್ರ ನಗರದ ಎಲ್ಲ ಕಡೆಗಳಲ್ಲೂ ಮುಂದುವರಿದಿದೆ. ನಾಳೆ ಮತ್ತೆ ಒಂದನೆ ವಿಭಾಗಕ್ಕೆ ನೀರು ಪೂರೈಕೆ ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.
ಆರು ವಿಭಾಗಗಳಲ್ಲಿ ಬಹುತೇಕ ಪ್ರದೇಶಗಳಿಗೆ ನೀರು ಸರಬರಾಜು ಮಾಡ ಲಾಗಿದ್ದು, ಸಾಧ್ಯವಾಗದ ಕಡೆಗಳಿಗೆ ಟ್ಯಾಂಕರ್ ಮೂಲಕ ಪೂರೈಸಲಾಗಿದೆ. ಆರು ದಿನಗಳಿಗೊಮ್ಮೆ ನೀರು ಬರುತ್ತಿರುವುದರಿಂದ ನೀರನ್ನು ಸಂಗ್ರಹಿಸಿ ಇಟ್ಟು ಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ. ಕೆಳಗಡೆ ಟ್ಯಾಂಕ್ ಇಲ್ಲದವರು ಬಕೆಟ್, ಡ್ರಮ್‌ಗಳಲ್ಲಿ ನೀರು ತುಂಬಿಸಿಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದನ್ನು ಆರು ದಿನಗಳ ಕಾಲ ಉಳಿಸಿ ಇಡುವುದೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಕೊಡವೂರು ನಿವಾಸಿಗಳು.
‘ಆರು ದಿನಗಳಿಗೊಮ್ಮೆ ನೀರು ನೀಡುವ ಕಾರಣದಿಂದ ಮಧ್ಯದಲ್ಲಿ ನೀರಿನ ಅನಿವಾರ್ಯತೆ ಎದುರಾದ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬ ರಾಜು ಮಾಡುವ ವ್ಯವಸ್ಥೆ ಮಾಡಲಾಗುತ್ತದೆ. ಆದರೂ ನಾವು ರೇಷನಿಂಗ್ ಪ್ರಕಾರವೇ ನೀರು ಪೂರೈಕೆ ಮಾಡಲು ಪ್ರಮುಖ ಆದ್ಯತೆ ನೀಡುತ್ತೇವೆ ಎಂದು ಉಡುಪಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶ ಸಂತೋಷ್ ಕುಮಾರ್ ತಿಳಿಸಿದರು.
ಬಜೆಯಲ್ಲಿ ನೀರಿನ ಮಟ್ಟ ಏರಿಕೆ: ಸ್ವರ್ಣ ನದಿಯ ನಾಲ್ಕು ಕಡೆಗಳಲ್ಲಿ ಕಳೆದ ಒಂದು ವಾರದಿಂದ ಡ್ರೆಡ್ಜಿಂಗ್ ನಡೆಸಿದ ಪರಿಣಾಮ ಇಂದು ನದಿಯಲ್ಲಿ ಹರಿವು ಹೆಚ್ಚಾಗಿ ಬಜೆ ಅಣೆಕಟ್ಟಿನಲಿ್ಲ ನೀರಿನ ಸಂಗ್ರಹದಲ್ಲಿ ಏರಿಕೆಯಾಗಿದೆ.
ಮೇ 7ರಿಂದ ಶಿರೂರು, ಮಾಣೈ, ಭಂಡಾರಿಬೆಟ್ಟು ಹಾಗೂ ಪುತ್ತಿಗೆ ಮಠದ ಬಳಿ ಸುಮಾರು 9 ಬೋಟುಗಳಲ್ಲಿ ಡ್ರೆಡ್ಜಿಂಗ್ ಕಾರ್ಯವನ್ನು ನಡೆಸುತ್ತಿದ್ದು, ಇಂದು ಕೂಡ ಆ ಕಾರ್ಯ ಮುಂದುವರೆದಿದೆ. ಇದರಿಂದ ಬಜೆ ಅಣೆಕಟ್ಟಿ ನಲ್ಲಿದ್ದ 1.20ಮೀಟರ್(ಮೇ12) ನೀರಿನ ಸಂಗ್ರಹವು ಇಂದು 1.60 ಮೀಟರ್‌ಗೆ ಹೆಚ್ಚಳವಾಗಿದೆ.
ನೀರಿನ ಹರಿವು ಹೆಚ್ಚಾಗಿರುವುದರಿಂದ ಬಜೆ ಅಣೆಕಟ್ಟಿನಲ್ಲಿ ಬೆಳಗ್ಗೆ 7ಗಂಟೆ ಗೆ ಆರಂಭಗೊಂಡ ಪಂಪಿಂಗ್ ಕಾರ್ಯ ನಿರಂತರವಾಗಿ ಸಂಜೆವರೆಗೂ ಮುಂದುವರೆದಿದೆ. ಸಾಮಾನ್ಯವಾಗಿ ಒಂದು ಗಂಟೆಗೆ 10.75ಲಕ್ಷ ಲೀಟರ್ ನೀರನ್ನು ಪಂಪ್ ಮಾಡಲಾಗುತ್ತದೆ. ಮುಂದೆ ಅದು ಫಿಲ್ಟರ್ ಆಗಿ ಮಣಿಪಾಲ ಶುದ್ದೀರಣ ಘಟಕಕ್ಕೆ ಸರಬರಾಜಾಗುತ್ತದೆ.
ಇಂದು ನಿಗದಿಪಡಿಸಿದ ಪ್ರದೇಶಗಳ ಪೈಕಿ ಕೆಲವು ಕಡೆಗಳಿಗೆ ನೀರು ಬಾರದ ಬಗ್ಗೆ ನಗರಸಭೆಗೆ ಒಟ್ಟು ಎಂಟು ದೂರುಗಳು ಬಂದಿದ್ದು, ಆ ಹಿನ್ನೆಲೆಯಲ್ಲಿ ಮಲ್ಪೆ, ಕಲ್ಸಂಕ, ಗುಂಡಿಬೈಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಯಿತು. ಈ ಪ್ರದೇಶಗಳಿಗೆ ಉಡುಪಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್, ಪೌರಾಯುಕ್ತ ಆನಂದ ಕಲ್ಲೋಳಿಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಸದ್ಯ ಸ್ವರ್ಣ ನದಿಯಲ್ಲಿ ಮೂರು ವಾರಗಳಿಗೆ ಬೇಕಾದಷ್ಟು ನೀರಿನ ಸಂಗ್ರಹ ವಿದ್ದು, ಪ್ರತಿದಿನ 9-10 ಎಂಎಲ್‌ಡಿ ನೀರು ಲಿಫ್ಟ್ ಮಾಡಲಾಗು ತ್ತಿದೆ. ಜೂನ್ ತಿಂಗಳ ಆರಂಭದಲ್ಲಿ ಮಳೆಗಾಲ ಪ್ರಾರಂಭವಾಗುವುದು ವಾಡಿಕೆ. ಒಂದು ವೇಳೆ ಮಳೆ ಬಾರದಿದ್ದರೆ ಜೂನ್ ಮೊದಲ ವಾರಕ್ಕೆ ಬೇಕಾದಷ್ಟು ನೀರಿನ ಸಂಗ್ರಹವನ್ನು ಇರಿಸಿಕೊಳ್ಳಲಾಗಿದೆ. ಟ್ಯಾಂಕರ್ ನೀರಿಗೆ ನಗರಸಭೆ ಹಾಗೂ ಜಿಲ್ಲಾಧಿಕಾರಿ ನಿಧಿಯಿಂದ ಹಣವನ್ನು ಬಳಕೆ ಮಾಡಲಾಗುತ್ತಿದೆ’
-ಸಂತೋಷ್ ಕುಮಾರ್, ಯೋಜನಾ ನಿರ್ದೇಶಕ, ನಗರಾಭಿವೃದ್ಧಿ ಕೋಶ, ಉಡುಪಿ.
ನೀರು ಪೂರೈಸುವ ಪ್ರದೇಶ
ಉಡುಪಿ ನಗರಸಭೆ ವ್ಯಾಪ್ತಿಯ ಕಲ್ಮಾಡಿ, ಬಂಕೇರಕಟ್ಟ, ಪಡುಕೆರೆ, ಶಾಂತಿನಗರ, ಕಲ್ಮಾಡಿ ಚರ್ಚ್ ಹಿಂಬದಿ, ಕೊಡವೂರು, ಕಾನಂಗಿ, ಕೊಡ ವೂರು ಮೂಡಬೆಟ್ಟು ರಸ್ತೆ, ಬಾಪುತೋಟ, ಶಸಿತೋಟ, ಮಲ್ಪೆ ಸೆಂಟ್ರಲ್, ಕೊಳ, ನೇರ್ಗಿ, ವಡಭಾಂಡೇಶ್ವರ, ಮಲ್ಪೆ ಬೀಚ್, ಪಾಳೆಕಟ್ಟೆ, ಕಾನಂಗಿ, ಚಿನ್ನಂಗಡಿ, ಹೆಬ್ಬಾರ್ ಮಾರ್ಗ, ಕೊಡವೂರು ಪೇಟೆ ಪ್ರದೇಶಗಳಿಗೆ ಮೇ 14 ರಂದು ನೀರು ಸರಬರಾಜು ಮಾಡಲಾಗುವುದು ಎಂದು ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








