ಮೈತ್ರಿ ಸರಕಾರದ ಕುರಿತಂತೆ ಪ್ರತಿಕ್ರಿಯೆಗೆ ಪ್ರಮೋದ್ ನಕಾರ
ಉಡುಪಿ, ಮೇ 13: ರಾಹುಲ್‌ಗಾಂಧಿ ಅಥವಾ ದೇವೇಗೌಡ್ರು ನಿಮ್ಮ ದಾರಿ ನಿಮಗೆ ಎಂದು ಹೇಳುವವರೆಗೂ ರಾಜ್ಯದಲ್ಲಿರುವ ಮೈತ್ರಿ ಸರಕಾರದ ಕುರಿತಂತೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮಾಜಿ ಮೀನುಗಾರಿಕಾ ಸಚಿವ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸ್ಪಷ್ಟಪಡಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಾಯಕ, ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ ಅವರು ರಾಜ್ಯದ ಮೈತ್ರಿ ಒಪ್ಪಂದ ಕುರಿತು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ನಾನು ಕಾಂಗ್ರೆಸ್‌ನ ವ್ಯಕ್ತಿ, ಜೆಡಿಎಸ್ ಚಿಹ್ನೆಯೊಂದಿಗೆ ಸ್ಪರ್ಧಿಸುತಿದ್ದೇನೆ. ಒಂದು ರೀತಿ ಹರಿಹರ ರೀತಿಯಲ್ಲಿ ಇರೋನು. ರಾಹುಲ್ ಗಾಂಧಿ ಅಥವಾ ದೇವೇಗೌಡರು ಸರಕಾರದ ಮುಂದಿನ ದಾರಿ ಬಗ್ಗೆ ಮಾತನಾಡಿದ ಬಳಿಕವಷ್ಟೇ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ರಾಜ್ಯದಲ್ಲಿ ಮೈತ್ರಿ ಸರಕಾರ ಬಂಡೆಕಲ್ಲಿನಂತೆ ಭದ್ರವಾಗಿದೆ. ಈ ಸರಕಾರವನ್ನು ಬೀಳಿಸೋ ಶಕ್ತಿ ಇರುವುದು ರಾಹುಲ್‌ಗಾಂಧಿ ಅಥವಾ ದೇವೇಗೌಡ್ರಿಗೆ ಮಾತ್ರ ಎಂದವರು ನುಡಿದರು.





