ಕಲಾಗ್ರಾಮ ದುರಸ್ತಿ ಕಾರ್ಯ ಚುರುಕುಗೊಳ್ಳಲಿ: ರಂಗಭೂಮಿ ಕಲಾವಿದರಿಂದ ಪ್ರತಿಭಟನೆ

ಬೆಂಗಳೂರು, ಮೇ 13: ನಗರದ ಮಲ್ಲತ್ತಹಳ್ಳಿಯ ಕಲಾಗ್ರಾಮ ರಂಗಮಂದಿರದ ದುರಸ್ತಿ ಕಾರ್ಯ ಚುರುಕುಗೊಂಡು, ಅಲ್ಲಿನ ರಂಗ ಚಟುವಟಿಕೆಗಳನ್ನು ಪುನರ್ ಆರಂಭಿಸಬೇಕೆಂದು ಒತ್ತಾಯಿಸಿ ರಂಗಭೂಮಿ ಕಲಾವಿದರು ಪ್ರತಿಭಟಿಸಿದರು.
ಸೋಮವಾರ ನಗರದ ಪುರಭವನ ಎದುರು ರಂಗ ವಸಂತ ಸಾಂಸ್ಕೃತಿಕ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಜಮಾಯಿಸಿದ ರಂಗಾಸಕ್ತರು, ಸತತ 5 ತಿಂಗಳಿನಿಂದ ಮುಚ್ಚಲ್ಪಟ್ಟಿರುವ ಮಲ್ಲತ್ತಹಳ್ಳಿಯ ಕಲಾಗ್ರಾಮದ ರಂಗಮಂದಿರ ಬಾಗಿಲು ತುರ್ತು ತೆರೆಯಬೇಕು ಎಂದು ಮನವಿ ಮಾಡಿದರು.
ಈ ಕುರಿತು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಎ.ಜೆ. ಅಜಯ್ ಕುಮಾರ್, ಕಲಾಗ್ರಾಮದ ರಂಗಮಂದಿರಲ್ಲಿ ಸುಮಾರು 5 ತಿಂಗಳ ಹಿಂದೆ ಅಗ್ನಿ ಅನಾಹುತ ಉಂಟಾಗಿ ಬಂದ್ ಆಗಿದ್. ಈ ಬಗ್ಗೆ ಅನೇಕ ವರದಿ, ದೂರುಗಳು ನೀಡಿದ್ದರೂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಯಾವುದೇ ರೀತಿಯ ದುರಸ್ತಿ ಕಾರ್ಯ ನಡೆದಿಲ್ಲ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ಸುಮಾರು 150 ಕ್ಕಿಂತಲೂ ಹೆಚ್ಚಿನ ಹವ್ಯಾಸಿ ತಂಡಗಳಿವೆ. ಆದರೆ, ಕೇವಲ ಬೆರಳೆಣಿಕೆಯಷ್ಟು ಮಾತ್ರ ರಂಗಮಂದಿರಗಳಿವೆ. ಅದರಲ್ಲೂ ಬಹುತೇಕ ಎಲ್ಲ ರಂಗಮಂದಿರಗಳು ಖಾಸಗಿಯಾಗಿದ್ದು, ಇದರ ಬಾಡಿಗೆ ವೆಚ್ಚ ದುಬಾರಿಯಾಗಿದೆ. ಹೀಗಾಗಿ, ರಂಗ ತಂಡಗಳಿಗೆ ಕಡಿಮೆ ಬಾಡಿಗೆ ದರದಲ್ಲಿ ದೊರೆಯುವ ರಂಗ ಮಂದಿರಗಳೆಂದರೆ, ರವೀಂದ್ರ ಕಲಾಕ್ಷೇತ್ರ ಮತ್ತು ಮಲ್ಲತ್ತಹಳ್ಳಿಯ ಕಲಾಗ್ರಾಮ. ಆದರೂ, ಇಲಾಖೆ ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆಂದು ಆರೋಪಿಸಿದರು.