ಮಳೆಗಾಗಿ ಸಾಮೂಹಿಕ ಪ್ರಾರ್ಥನೆ: ಶಾಸಕ ಕಾಮತ್

ಮಂಗಳೂರು, ಮೇ 13: ಎಲ್ಲ ಜಾತಿ, ಮತ, ಧರ್ಮದ ನಾಗರಿಕರು ಮೇ 15ರಂದು ತಮ್ಮ ಶ್ರದ್ಧಾ ಕೇಂದ್ರ, ಧಾರ್ಮಿಕ ಕೇಂದ್ರಗಳಲ್ಲಿ ಮಳೆಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಮಂಗಳೂರಿನ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಮಂಗಳೂರಿನಲ್ಲಿ ನೀರಿನ ಕೊರತೆ ಉಂಟಾಗಿದೆ. ಈ ಸಂದರ್ಭ ನಾವೆಲ್ಲರೂ ಪರಸ್ಪರರ ಒಳಿತಿಗಾಗಿ, ಶುದ್ಧ ಅಂತಃಕರಣಪೂರ್ವಕವಾಗಿ ದೇವರನ್ನು ಪ್ರಾರ್ಥಿಸಿದರೆ ಅದರಿಂದ ಖಂಡಿತ ಒಳ್ಳೆಯದಾಗುತ್ತದೆ. ನೀರು ಪ್ರತಿಯೊಂದು ಜೀವಿಗೂ ಅತ್ಯವಶ್ಯಕವಾಗಿದೆ. ಮನುಷ್ಯನಿಗೆ ಮಾತ್ರವಲ್ಲ, ಪ್ರಾಣಿ, ಪಕ್ಷಿಗಳಿಗೂ ಬೇಕು. ಎಲ್ಲರೂ ಸೇರಿ ದೇವಸ್ಥಾನ, ಚರ್ಚು, ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಮಂಗಳೂರಿಗೆ ಬಂದಿರುವ ಈ ಸಂಕಟವನ್ನು ಪರಿಹರಿಸಲು ಬೇಡೋಣ ಎಂದು ಹೇಳಿಕೆಯಲ್ಲಿ ತಿಳಿಸಿದರು.
ಆಯಾ ಶ್ರದ್ಧಾ ಕೇಂದ್ರಗಳ ಪ್ರಮುಖರು, ಆಡಳಿತ ಮಂಡಳಿಗಳು, ಟ್ರಸ್ಟಿಗಳು, ಧರ್ಮಗುರುಗಳು ಬುಧವಾರ ಒಂದು ನಿರ್ದಿಷ್ಟ ಸಮಯವನ್ನು ಹೊಂದಿಸಿ ಆ ಪರಿಸರದ ನಾಗರಿಕರನ್ನು ಕರೆಸಿ ಸಾಮೂಹಿಕವಾಗಿ ಊರಿನ, ನಾಡಿನ ನೀರಿನ ಕೊರತೆಯನ್ನು ಬಗೆಹರಿಸಲು ಮಳೆಗಾಗಿ ಪ್ರಾರ್ಥಿಸೋಣ. ಎಲ್ಲರ ಪ್ರಾರ್ಥನೆ ಫಲಿಸಿ ಶೀಘ್ರದಲ್ಲಿ ಮಳೆ ಬಂದು ನಮ್ಮ ತೊಂದರೆಗಳು ಬಗೆಹರಿಯಬಹುದು ಎಂದು ಶಾಸಕ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳಾದೇವಿ ದೇವಸ್ಥಾನ, ಕದ್ರಿ ಮಂಜುನಾಥ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ಕಂಕನಾಡಿ ಗರೋಡಿ, ಕುಡುಪು ದೇವಸ್ಥಾನ, ಗಣಪತಿ ದೇವಸ್ಥಾನ ಉರ್ವಸ್ಟೋರ್, ಉರ್ವ ಮಾರಿಗುಡಿ ದೇವಸ್ಥಾನ, ಮುಖ್ಯಪ್ರಾಣ ದೇವಸ್ಥಾನ ಬೋಳಾರ, ಪಂಚಲಿಂಗೇಶ್ವರ ದೇವಸ್ಥಾನ ಪಾಂಡೇಶ್ವರ, ರಥಬೀದಿ ವೆಂಕಟರಮಣ ದೇವಸ್ಥಾನ, ಡೊಂಗರಕೇರಿ ವೆಂಕಟರಮಣ ದೇವಸ್ಥಾನ, ಮುಖ್ಯಪ್ರಾಣ ದೇವಸ್ಥಾನ ಬಜಿಲ್ ಕೇರಿ, ಕಾಳಿಕಾಂಬ ದೇವಸ್ಥಾನ, ಶರವು ಮಹಾಗಣಪತಿ ದೇವಸ್ಥಾನ, ಕಾವು ಪಂಚಲಿಂಗೇಶ್ವರ ದೇವಸ್ಥಾನ, ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಗೋಪಾಲಕೃಷ್ಣ ದೇವಸ್ಥಾನ ಶಕ್ತಿನಗರ, ಕಾತ್ಯಾಯಿನಿ ಮಠ ರಥಬೀದಿ ಇಲ್ಲೆಲ್ಲ ಪ್ರಮುಖರನ್ನು ಸೇರಿಸಿ ವಿಶೇಷವಾದ ಪ್ರಾರ್ಥನೆ ಮತ್ತು ಪೂಜೆಯನ್ನು ಸಲ್ಲಿಸಲಿದ್ದಾರೆ ಎಂದರು.
ಅದೇರೀತಿ ತಮ್ಮ ಶ್ರದ್ಧಾಕೇಂದ್ರಗಳಲ್ಲಿ ಮುಸ್ಲಿಮರು ಮಳೆಗಾಗಿ ವಿಶೇಷ ಪ್ರಾರ್ಥನೆ ನಡೆಸಲಿದ್ದಾರೆ. ಅದರೊಂದಿಗೆ ಕ್ರೈಸ್ತ ಕೂಡ ಮಳೆಗಾಗಿ ವಿಶೇಷವಾಗಿ ಪ್ರಾರ್ಥನೆಯನ್ನು ಸಲ್ಲಿಸಲಿದ್ದಾರೆ. ಮಂಗಳೂರಿನ ಜನತೆ ಈ ವಿಶೇಷ ಪ್ರಾರ್ಥನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸಿ, ಪೂಜೆ ಪುನಸ್ಕಾರ ಮಾಡಿ, ಎಲ್ಲ ಜಾತಿ, ಮತ, ಧರ್ಮದವರು ಒಟ್ಟಾಗಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಶಾಸಕ ಕಾಮತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







