ಮಡುರೊ ವಿರುದ್ಧ ಬಂಡೇಳಲು ಸೈನಿಕರಿಗೆ ಸೇನಾಧಿಕಾರಿ ಕರೆ

ಕ್ಯಾರಕಸ್ (ವೆನೆಝುವೆಲ), ಮೇ 13: ಅಧ್ಯಕ್ಷ ನಿಕೊಲಸ್ ಮಡುರೊ ವಿರುದ್ಧ ಬಂಡೇಳುವಂತೆ ವೆನೆಝೆವೆಲದ ಸೇನಾಧಿಕಾರಿಯೊಬ್ಬರು ದೇಶದ ಸಶಸ್ತ್ರ ಪಡೆಗಳಿಗೆ ರವಿವಾರ ಕರೆ ನೀಡಿದ್ದಾರೆ. ದೇಶದಲ್ಲಿ ಆರ್ಥಿಕತೆ ಸಂಪೂರ್ಣವಾಗಿ ಕುಸಿದಿರುವ ಹೊರತಾಗಿಯೂ, ಅಧ್ಯಕ್ಷರು ಸೇನೆಯ ಬೆಂಬಲದೊಂದಿಗೆ ಅಧಿಕಾರದಲ್ಲಿ ಮುಂದುವರಿದಿದ್ದಾರೆ.
ವೆನೆಝುವೆಲ ಸರಕಾರವನ್ನು ಕ್ಯೂಬಾದ ‘ಕಮ್ಯುನಿಸ್ಟ್ ಸರ್ವಾಧಿಕಾರಿ ಆಡಳಿತ’ ನಿಯಂತ್ರಿಸುತ್ತಿದೆ ಎಂದು ತನ್ನನ್ನು ವಾಯುಪಡೆ ಜನರಲ್ ಎಂಬುದಾಗಿ ಗುರುತಿಸಿಕೊಂಡ ರಮೊನ್ ರಾಂಜೆಲ್ ಹೇಳಿದರು.
‘‘ಈ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ನಮ್ಮ ಭಯವನ್ನು ಹೋಗಲಾಡಿಸಲು, ಬೀದಿಗಳಿಗೆ ಇಳಿಯಲು, ಪ್ರತಿಭಟಿಸಲು ಹಾಗೂ ಸೇನೆಯ ಬೆಂಬಲವನ್ನು ಕೋರಲು ನಾವು ವಿಧಾನವೊಂದನ್ನು ಕಂಡುಹಿಡಿಯಬೇಕಾಗಿದೆ’’ ಎಂದು ಸಂವಿಧಾನದ ಪ್ರತಿಯೊಂದನ್ನು ಕೈಯಲ್ಲಿ ಹಿಡಿದುಕೊಂಡ ರಾಂಜೆಲ್ ‘ಯೂ ಟ್ಯೂಬ್’ನಲ್ಲಿ ಹಾಕಿದ ವೀಡಿಯೊವೊಂದರಲ್ಲಿ ಹೇಳಿದ್ದಾರೆ.
‘‘ಇದು ಬಂಡಾಯ ಏಳುವ ಸಮಯ’’ ಎಂದು ಅವರು ಕರೆ ನೀಡಿದ್ದಾರೆ.
ಈ ವರ್ಷ ಹಲವಾರು ಹಿರಿಯ ಸೇನಾಧಿಕಾರಿಗಳು ಸೇನೆಯನ್ನು ತೊರೆದು ಪ್ರತಿಭಟನಕಾರರಿಗೆ ಬೆಂಬಲ ನೀಡಿದ್ದು, ಈ ಬೆಳವಣಿಗೆಯು ಮಡುರೊ ಸರಕಾರಕ್ಕೆ ಹಿನ್ನಡೆಯಾಗಿದೆ. ಆದರೆ, ಇದು ಯಾವ ಪರಿಣಾಮವನ್ನು ಬೀರುತ್ತದೆ ಎನ್ನುವುದು ಖಚಿತವಾಗಿಲ್ಲ.
ಮಡೊರೊ ಅವರನ್ನು ತೊರೆದ ಸೇನಾಧಿಕಾರಿಗಳು ದೇಶವನ್ನು ತೊರೆದಿದ್ದಾರೆ ಹಾಗೂ ಸೈನಿಕರನ್ನು ನಿಯಂತ್ರಿಸುವ ಸೇನೆಯ ಉನ್ನತಾಧಿಕಾರಿಗಳು ಮಡುರೊಗೆ ಬೆಂಬಲ ನೀಡುವುದನ್ನು ಮುಂದುವರಿಸಿದ್ದಾರೆ.







