ಮತದಾನ ಕೇಂದ್ರದಲ್ಲಿ ಅಕ್ರಮ: ಕಮಲ ಚಿಹ್ನೆಗೆ ಮತ ನೀಡುವಂತೆ ಒತ್ತಾಯಿಸಿದ್ದ ಬಿಜೆಪಿ ಏಜೆಂಟ್
ಮಹಿಳೆಯ ಆರೋಪ

ಫರೀದಾಬಾದ್, ಮೇ 14: ಫರೀದಾಬಾದ್ ನ ಅಸೋಟಿ ಗ್ರಾಮದಲ್ಲಿನ ಮತದಾನ ಕೇಂದ್ರವೊಂದರಲ್ಲಿ ಅಕ್ರಮ ನಡೆಸಿದ್ದಕ್ಕಾಗಿ ಬಂಧನಕ್ಕೊಳಗಾಗಿ ಕೆಲವೇ ಗಂಟೆಗಳಲ್ಲಿ ಬಿಡುಗಡೆಗೊಂಡಿದ್ದ ಬಿಜೆಪಿ ಏಜಂಟ್ ಗಿರಿರಾಜ್ ಸಿಂಗ್ ತಾನು ಕೇವಲ ಗ್ರಾಮದ ಕೆಲ ಅನಕ್ಷರಸ್ಥ ಮಹಿಳೆಯರಿಗೆ ಮತ ಚಲಾಯಿಸಲು ಸಹಾಯ ಮಾಡಿದ್ದಾಗಿ ಹೇಳಿಕೊಂಡಿದ್ದ. ಆದರೆ ಆತ ಬಿಜೆಪಿಯ ಚಿಹ್ನೆಯಿರುವ ಪಕ್ಕದ ಗುಂಡಿಯನ್ನೊತ್ತುವಂತೆ ತನಗೆ ಒತ್ತಾಯಿಸಿದ್ದ ಘಟನೆಯ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದ ಮಹಿಳೆ, ಅದೇ ಗ್ರಾಮದ ನಿವಾಸಿ ಶೋಭಾ ಹೇಳಿದ್ದಾರೆ.
“ತಾವರೆಗೆ ಮತ ನೀಡುವಂತೆ ಆತ ಹೇಳಿದ. ಅದು ನನ್ನ ಇಚ್ಛೆ ನನಗೆ ಬೇಕಾದ ಪಕ್ಷಕ್ಕೆ ನಾನು ಮತ ನೀಡುವುದಾಗಿ ಹೇಳಿದೆ'' ಎಂದು ಆಕೆ ಹೇಳಿದ್ದಾರೆ. ಮನೆಯಲ್ಲಿ ತನ್ನ ಪುತ್ರಿಗೆ ಅಸೌಖ್ಯವಿದ್ದುದರಿಂದ ಕೂಡಲೇ ಮನೆಗೆ ತೆರಳಬೇಕಾದುದರಿಂದ ಆ ಕ್ಷಣ ಯಾರಲ್ಲೂ ಹೇಳಿರಲಿಲ್ಲ ಎಂದೂ ಆಕೆ ಹೇಳಿಕೊಂಡಿದ್ದಾಳೆ.
ಗಿರಿರಾಜ್ ಸಿಂಗ್ ಮತದಾನದ ವೇಳೆ ಕನಿಷ್ಠ ಮೂರು ಮತದಾರರಿಗೆ ಸಹಾಯ ಮಾಡುವ ನೆಪದಲ್ಲಿ ತನಗೆ ಬೇಕಾದ ಪಕ್ಷಕ್ಕೆ ಮತ ಚಲಾಯಿಸುವಂತೆ ಮಾಡಿದ್ದಾನೆಂಬ ಆರೋಪ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಕೇಳಿ ಬಂದಿತ್ತು. ಚುನಾವಣಾ ಆಯೋಗವೂ ತಕ್ಷಣ ಆತನ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಿತ್ತು.
ಆದರೆ ಫರೀದಾಬಾದ್ ನಲ್ಲಿ 28 ಅಭ್ಯರ್ಥಿಗಳಿದ್ದುದರಿಂದ ಹಾಗೂ ಅಲ್ಲಿನ ಮಹಿಳೆಯರು ಅನಕ್ಷರಸ್ಥರಾಗಿದ್ದರಿಂದ ಅವರಿಗೆ ಸಹಾಯ ಮಾಡಿದ್ದೆ ಎಂದು ಆತ ತಿಳಿಸಿದ್ದ.







