ಬೈಕಂಪಾಡಿ ಮಸೀದಿಯಲ್ಲಿ ರಮಝಾನ್ ಪೂರ್ತಿ ಇಫ್ತಾರ್‌ನಲ್ಲಿ ಊಟದ ವ್ಯವಸ್ಥೆ

ಮಂಗಳೂರು, ಮೇ 14: ರಮಝಾನ್‌ನಲ್ಲಿ ಸಾಮಾನ್ಯವಾಗಿ ಎಲ್ಲಾ ಮಸೀದಿಗಳಲ್ಲೂ ಮುಸ್ಸಂಜೆಗೆ ಇಫ್ತಾರ್ ವ್ಯವಸ್ಥೆ ಆಯೋಜಿಸುವುದು ಸಾಮಾನ್ಯವಾಗಿದೆ. ಕೆಲಸ, ಕರ್ತವ್ಯಕ್ಕೆಂದು ಮನೆಯ ಹೊರಗಡೆ ಹೋದವರಿಗೆ ಈ ಇಫ್ತಾರ್ ತುಂಬಾ ನೆರವಾಗುವುದರಲ್ಲಿ ಸಂದೇಹವಿಲ್ಲ.
ಇಫ್ತಾರ್‌ನಲ್ಲಿ ಹಣ್ಣು ಫಲಾಹಾರ, ಪಾನೀಯ ಸಾಮಾನ್ಯವಾಗಿದೆ. ಆದರೆ ಬೈಕಂಪಾಡಿಯ ಮುಹಿಯ್ಯುದ್ದೀನ್ ಜುಮಾ ಮಸೀದಿಯಲ್ಲಿ ನಡೆಯುವ ಇಫ್ತಾರ್ ಕೂಟದಲ್ಲಿ ರಮಝಾನ್ ತಿಂಗಳ ಎಲ್ಲಾ ದಿನವೂ ಫಲಾಹಾರದೊಂದಿಗೆ ಮಾಂಸಾಹಾರಿ ಊಟದ ವ್ಯವಸ್ಥೆಯನ್ನೂ ಕಳೆದ ಹಲವು ವರ್ಷಗಳಿಂದ ಮಾಡುತ್ತಿರುವುದು ವಿಶೇಷವಾಗಿದೆ.
ಹಿಂದೆ ಈ ಮಸೀದಿಯಲ್ಲಿ ಫಲಾಹಾರದೊಂದಿಗೆ ಮಾತ್ರ ಇಫ್ತಾರ್ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಕಳೆದ 5 ವರ್ಷಗಳಿಂದ ಇಲ್ಲಿ ಇಫ್ತಾರ್ ಮತ್ತು ಮಗ್ರಿಬ್ ನಮಾಝ್ ಬಳಿಕ ಮಾಂಸಾಹಾರಿ ಊಟೋಪಚಾರದ ವ್ಯವಸ್ಥೆಯನ್ನೂ ಏರ್ಪಡಿಸಲಾಗುತ್ತಿದೆ. ಇದು ಇಲ್ಲಿನ ಕಾರ್ಮಿಕರಿಗೆ ತುಂಬಾ ನೆರವಾಗಿದೆ.
ಬೈಕಂಪಾಡಿ ಕೈಗಾರಿಕಾ ಪ್ರದೇಶವಾಗಿದೆ. ಇಲ್ಲಿ ಹಲವಾರು ಕೈಗಾರಿಕಾ ಕಾರ್ಖಾನೆಗಳಿದ್ದು, ಸಮೀಪದ ಪಣಂಬೂರು, ಎನ್‌ಎಂಪಿಟಿ ಹಾಗೂ ಎಪಿಎಂಸಿ ಪ್ರದೇಶಗಳಿಂದಲೂ ಕಾರ್ಮಿಕರು, ಸಾರ್ವಜನಿಕರು ಇಲ್ಲಿನ ಮಸೀದಿಗೆ ಇಫ್ತಾರ್‌ಗೆ ಆಗಮಿಸುತ್ತಾರೆ. ಅದರಲ್ಲೂ ಉತ್ತರ ಭಾರತ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತಿತರ ಕಡೆಗಳಿಂದ ಬಂದು ಇಲ್ಲಿ ದುಡಿಯುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಬೈಕಂಪಾಡಿ ಮಸೀದಿಗೆ ಇಫ್ತಾರ್‌ಗೆ ಬರುತ್ತಾರೆ. ಹೆಚ್ಚಿನವರು ಕೆಲಸಕ್ಕೆ ಹೋಗಿ ದುಡಿದು, ಸಂಜೆ ಬರುವಾಗ ಇಫ್ತಾರ್ ಸಮಯ ಹತ್ತಿರ ಇರುವುದರಿಂದ ಮಸೀದಿಗೆ ಆಗಮಿಸುತ್ತಾರೆ. ಹೆಚ್ಚಿನವರ ಕುಟುಂಬ ಅವರವರ ರಾಜ್ಯಗಳಲ್ಲಿಯೇ ಇದ್ದು, ಇಲ್ಲಿನ ಬೈಕಂಪಾಡಿ ಕೈಗಾರಿಕಾ ಪ್ರದೇಶ, ಪಣಂಬೂರು, ಅಂಗರಗುಂಡಿ ಆಸುಪಾಸಿನಲ್ಲಿ ತಾವೇ ಬಾಡಿಗೆ ರೂಮಿನಲ್ಲಿ ನೆಲೆಸಿರುತ್ತಾರೆ. ಇವರು ಮಗ್ರಿಬ್ ಬಳಿಕ ಮನೆಗೆ ತೆರಳಿ ನಂತರ ಭೋಜನವನ್ನು ಸಿದ್ಧಪಡಿಸಬೇಕಿತ್ತು. ಇದರಿಂದ ರಾತ್ರಿ ತರಾವೀಹ್ ನಮಾಝ್‌ಗೂ ಕ್ಲಪ್ತ ಸಮಯಕ್ಕೆ ತಲುಪಲು ಇವರಿಗೆ ಸಾಧ್ಯವಾಗುತ್ತಿರಲಿಲ್ಲ. ಮೊದಲೇ ದಿನವಿಡೀ ದುಡಿದು ಬಂದು ಆಯಾಸಗೊಂಡಿದ್ದ ಇವರೆಲ್ಲರಿಗೂ ಇಫ್ತಾರ್‌ನಲ್ಲಿ ಭೋಜನ ವ್ಯವಸ್ಥೆ ಬಹಳ ಪ್ರಯೋಜನಕಾರಿಯಾಗಿದೆ. ಇದಲ್ಲದೇ ಸ್ಥಳೀಯ ನಿವಾಸಿಗಳೂ ಈ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುತ್ತಾರೆ.
ಬೈಕಂಪಾಡಿ ಜುಮ್ಮಾ ಮಸೀದಿ ಮುಸ್ಲಿಂ ಜಮಾಅತ್ ವತಿಯಿಂದ ನಡೆಯುವ ಈ ಇಫ್ತಾರ್ ಕೂಟದಲ್ಲಿ ಪ್ರಸಕ್ತ ವರ್ಷ ಎಲ್ಲಾ ದಿನಗಳಲ್ಲೂ ಇಫ್ತಾರ್‌ನೊಂದಿಗೆ ಮಾಂಸಾಹಾರಿ ಭೋಜನ ನೀಡಲಾಗುತ್ತಿದೆ. ಪ್ರತಿನಿತ್ಯ ಒಂದೊಂದು ದಿನ ಬಿರಿಯಾನಿ, ತುಪ್ಪದೂಟ ಅಥವಾ ಪರೋಟ ಮತ್ತು ಮಾಂಸ ಪದಾರ್ಥವನ್ನು ಮಗ್ರಿಬ್ ನಮಾಝ್ ಬಳಿಕ ಪ್ಲಾಸ್ಟಿಕ್ ಪೊಟ್ಟಣದಲ್ಲಿ ಕಟ್ಟಿ ನೀಡಲಾಗುತ್ತಿದೆ. ಅಂಗರಗುಂಡಿ ಪರಿಸರದ ಯುವಕರು ಸ್ವಯಂಸೇವೆ ನಡೆಸಿ ಇಲ್ಲಿನ ಇಫ್ತಾರ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಪ್ರತೀ ದಿನ ಅಂದಾಜು 300ಕ್ಕೂ ಅಧಿಕ ಮಂದಿ ಈ ಇಫ್ತಾರ್‌ನಲ್ಲಿ ಭಾಗವಹಿಸುತ್ತಾರೆ.
ಸಂಪೂರ್ಣವಾಗಿ ದಾನಿಗಳ ನೆರನಿಂದ ರಮಝಾನ್‌ನ ಈ ಇಫ್ತಾರ್ ಕೂಟವನ್ನು ಏರ್ಪಡಿಸಲಾಗುತ್ತಿದ್ದು, ಇದಕ್ಕೆ ಜಮಾಅತ್ ಕಮಿಟಿ ವತಿಯಿಂದ ಯಾವುದೇ ಖರ್ಚು ವೆಚ್ಚ ಮಾಡುವ ಅಗತ್ಯ ಬೀಳುವುದಿಲ್ಲ ಎಂದು ಬೈಕಂಪಾಡಿ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಹೇಳುತ್ತಾರೆ.
ರಮಝಾನ್ ತಿಂಗಳ ಸಾಕಷ್ಟು ಮೊದಲೇ ಇದಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಪ್ರತೀ ದಿನದ ಖರ್ಚನ್ನು ಒಬ್ಬೊಬ್ಬರು ದಾನಿ ಪ್ರಾಯೋಜಿಸುತ್ತಾರೆ. ಯಾವುದೇ ಗೊಂದಲಗಳಿಲ್ಲದೇ ಕಳೆದ ಕೆಲವು ವರ್ಷಗಳಿಂದ ಇಲ್ಲಿನ ರಮಝಾನ್ ಇಫ್ತಾರ್ ಕೂಟ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಇದರಿಂದ ಸ್ಥಳಿಯರಿಗೆ ವಿಶೇಷವಾಗಿ ಹೊರಗಿನಿಂದ ಬಂದು ಇಲ್ಲಿ ನೆಲೆಸಿರುವ ಮುಸ್ಲಿಮರಿಗೆ ಬಹಳ ಪ್ರಯೋಜನಕಾರಿಯಾಗಿದೆ ಎಂದು ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅಭಿಪ್ರಾಯಪಡುತ್ತಾರೆ.







