ವಿವಾಹಿತ ಮಹಿಳೆಯ ಬರ್ಬರ ಹತ್ಯೆ ಪ್ರಕರಣ: ನಾಗುರಿ ಬಾವಿಯಲ್ಲಿ ತೀವ್ರಗೊಂಡ ಶ್ವಾನದಳ ತಪಾಸಣೆ

ಮಂಗಳೂರು, ಮೇ 14: ನಗರದಲ್ಲಿ ನಡೆದ ವಿವಾಹಿತ ಮಹಿಳೆ ಶ್ರೀಮತಿ ಶೆಟ್ಟಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಗುರಿ ಸಮೀಪದ ಬಾವಿಯೊಂದರಲ್ಲಿ ಮಹಿಳೆಯ ಕಾಲುಗಳು ಪತ್ತೆಯಾಗಿವೆ ಎನ್ನುವ ಶಂಕೆಯಲ್ಲಿ ಶ್ವಾನದಳ ತಪಾಸಣೆ ನಡೆಸಿದೆ.
ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ನಾಗುರಿ ಸಮೀಪದ ಬಾವಿಯಲ್ಲಿ ಮಹಿಳೆಯ ಕಾಲುಗಳಿವೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದರು. ವಿಷಯ ತಿಳಿದ ಪೊಲೀಸರು ಶ್ವಾನದಳ ಸಮೇತ ಕಾರ್ಯಾಚರಣೆ ನಡೆಸಿದ್ದಾರೆ. ಶ್ವಾನಗಳು ಬಾವಿಯ ಸುತ್ತ ಎರಡು ಸುತ್ತು ಹಾಕಿವೆ. ಬಳಿಕ ಸಿಬ್ಬಂದಿಯಿಂದ ಬಾವಿಯನ್ನು ತಪಾಸಣೆ ನಡೆಸಲಾಯಿತು. ಮಧ್ಯಮ ಗಾತ್ರದ ಪ್ಲಾಸ್ಟಿಕ್ ಚೀಲಗಳಿರುವುದು ಪತ್ತೆಯಾಗಿದೆ ವಿನಃ ಅದರಲ್ಲಿ ಯಾವುದೇ ಅಂಗಾಂಗಳು ಪತ್ತೆಯಾಗಿಲ್ಲ.
‘ನಾಗುರಿ ಸಮೀಪದ ಸೋಮವಾರ ರಾತ್ರಿ ಬೈಕ್ ಸಿಕ್ಕಿರುವುದು ನಿಜ. ಆದರೆ ಬಾವಿಯಲ್ಲಿ ಮಹಿಳೆಯ ಅಂಗಾಂಗಗಳಿವೆ ಎನ್ನುವುದು ಸುಳ್ಳು. ಇದೊಂದು ಹುಸಿಕರೆಯಾಗಿದೆ. ತಪಾಸಣೆ ವೇಳೆ ತನಿಖೆಗೆ ಸಹಕಾರಿಯಾಗುವಂತಹ ಯಾವುದೇ ಸಾಕ್ಷಗಳು ದೊರೆತಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.










