ಮೇ 23ರ ಬಳಿಕ ಬಿಎಸ್‌ವೈ ಬಿಜೆಪಿ ತೊರೆಯಲಿದ್ದಾರೆ: ಸಿ.ಎಂ.ಇಬ್ರಾಹಿಂ

ಬೆಂಗಳೂರು, ಮೇ 14: ಲೋಕಸಭಾ ಚುನಾವಣೆಯ ಫಲಿತಾಂಶ ಮೇ 23ರಂದು ಪ್ರಕಟವಾದ ನಂತರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಬಿಟ್ಟು ಹೊರ ನಡೆಯಲಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆವರು, ಅಧಿಕಾರ ಇಲ್ಲದೇ ಇರುವ ಪಕ್ಷದಲ್ಲಿ ಯಾರೂ ಉಳಿಯುವುದಿಲ್ಲ. ರಾಜ್ಯದಲ್ಲಿ ಬಿಜೆಪಿಯ ಅಸ್ತಿತ್ವ ಉಳಿದಿರುವುದೇ ಯಡಿಯೂರಪ್ಪ ಬಲದ ಮೇಲೆ. ಆದರೆ, ಬಿಜೆಪಿ ಪಕ್ಷವು ವೀರಶೈವ ಲಿಂಗಾಯತರಿಗೆ ಅನ್ಯಾಯ ಮಾಡಿದ್ದು, ರಾಜ್ಯದಿಂದ ಎಂಟು ಮಂದಿ ವೀರಶೈವ ಲಿಂಗಾಯತ ಸಮುದಾಯದ ಸಂಸದರು ಆಯ್ಕೆಯಾಗಿದ್ದರೂ, ಐದು ವರ್ಷಗಳಲ್ಲಿ ಒಬ್ಬರಿಗೂ ಕೇಂದ್ರ ಸಚಿವ ಸ್ಥಾನ ಕಲ್ಪಿಸಿಲ್ಲ ಎಂದು ಅವರು ಆರೋಪಿಸಿದರು.
ವೈಯಕ್ತಿಕವಾಗಿ ಯಡಿಯೂರಪ್ಪ ತುಂಬಾ ಒಳ್ಳೆಯವರು. ಆದರೆ, ಅವರು ಪ್ರತಿನಿಧಿಸುತ್ತಿರುವ ಪಕ್ಷ ಮಾತ್ರ ಸರಿಯಿಲ್ಲ. ಬಿಜೆಪಿಯಲ್ಲೂ ಯಡಿಯೂರಪ್ಪ ವಿರುದ್ಧ ಒಂದು ಬಣ ಕೆಲಸ ಮಾಡುತ್ತಿದೆ. ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನಗಳು ನಡೆಯುತ್ತಿವೆ. ಆದುದರಿಂದ, ರಾಜ್ಯದಲ್ಲಿ ಬಿಜೆಪಿಗೆ ಇನ್ನು ಮುಂದೆ ಭವಿಷ್ಯವಿಲ್ಲದಂತಾಗುತ್ತದೆ ಎಂದು ಇಬ್ರಾಹಿಂ ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಕಳೆದ 35 ವರ್ಷಗಳಿಂದಲೂ ಅವರಿಬ್ಬರೂ ಸ್ನೇಹಿತರು. ಈಗ ಇವರಿಬ್ಬರ ನಡುವೆ ನಡೆಯುತ್ತಿರುವ ಆರೋಪ-ಪ್ರತ್ಯಾರೋಪಗಳು ಕೇವಲ ತೋರಿಕೆಗೆ ಮಾತ್ರ ಎಂದು ಅವರು ತಿಳಿಸಿದರು.
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಎಲ್ಲವೂ ಸರಿ ಹೋಗುತ್ತದೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ. ರಾಜ್ಯದಲ್ಲಿಯೂ ಮೈತ್ರಿ ಸರಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಇಬ್ರಾಹಿಂ ಹೇಳಿದರು.







