ನಗರಸಭೆ: ಬ್ಯಾನರ್, ಕಟೌಟ್‌ಗೆ ಅನುಮತಿ ಕಡ್ಡಾಯ
ಉಡುಪಿ, ಮೇ 14: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೇ ಅನಧಿಕೃತವಾಗಿ ಬ್ಯಾನರ್, ಕಟೌಟ್, ಫ್ಲೆಕ್ಸ್‌ಗಳನ್ನು ಅಳವಡಿಸಿ ವಾಹನ ಸಂಚಾರ ಹಾಗೂ ಸಾರ್ವಜನಿಕರ ತಿರುಗಾಟಕ್ಕೆ ತೊಂದರೆ ಪಡಿಸುತ್ತಿರುವುದು ಹಾಗೂ ಹೊಟೇಲ್, ಅಂಗಡಿ ಮತ್ತು ಇತರೆ ವಾಣಿಜ್ಯ ಕಟ್ಟಡಗಳ ಮಾಲಕರು ಅನುಮತಿ ಪಡೆಯದೇ ಸಾರ್ವಜನಿಕ/ಖಾಸಗಿ ಸ್ಥಳಗಳಲ್ಲಿ ಪ್ಲೆಕ್ಸ್, ಬ್ಯಾನರ್ ಜಾಹಿರಾತು ಫಲಕಗಳನ್ನು ಅಳವಡಿಸುತ್ತಿರುವುದು ಕಂಡುಬಂದಿದೆ.
ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳು ಕೇಳಿ ಬಂದಿದ್ದು, ಇಂತಹ ಜಾಹಿರಾತು ಫಲಕಗಳನ್ನು ನಿಯಂತ್ರಿಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಪ್ರಚಾರಗಳ ಬ್ಯಾನರ್/ಕಟೌಟ್, ಫ್ಲೆಕ್ಸ್, ಜಾಹಿರಾತು ಫಲಕಗಳನ್ನು ಸಾರ್ವಜನಿಕ / ಖಾಸಗಿ ಸ್ಥಳಗಳಲ್ಲಿ ಅಳವಡಿಸುವ ಮುಂಚೆ ನಗರಸಭೆಯ ಅನುಮತಿಯನ್ನು ಕಡ್ಡಾಯವಾಗಿ ಪಡೆದು, ಅನುಮತಿ ಸಂಖ್ಯೆ ಮತ್ತು ಅವಧಿಯನ್ನು ದಾಖಲಿಸಬೇಕು. ಪ್ಲಾಸ್ಟಿಕ್ ಬಳಕೆ ನಿಷೇಧ ಆಗಿರುವು ದರಿಂದ ಬಟ್ಟೆ ಬ್ಯಾನರ್‌ಗಳನ್ನು ಮಾತ್ರ ಬಳಸುವಂತೆ ಸೂಚಿಸಿದೆ.
ಹೀಗಾಗಿ ಕೂಡಲೇ ಯಾವುದೇ ಅನುಮತಿ ರಹಿತ ಜಾಹಿರಾತು ಫಲಕ ಗಳು ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿದ್ದರೆ ತೆರವುಗೊಳಿಸಬೇಕು. ಇಲ್ಲವಾದರೆ ಸೂಕ್ತ ದಂಡನೆ ವಿಧಿಸಿ, ಅನಧಿಕೃತವಾಗಿ ಅಳವಡಿಸಿ ಸಾರ್ವಜನಿಕ ಸ್ಥಳ ವಿರೂಪಗೊಳಿಸುವ ಕುರಿತು ಕರ್ನಾಟಕ ಪುರಸಭಾ ನಿಯಮದಂತೆ ಕ್ರಮ ಜರಗಿಸಲಾಗುವುದು ಎಂದು ಉಡುಪಿ ನಗರಸಭಾ ಪೌರಾಯುಕ್ತರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.





