ಲಕ್ಷ್ಮೀನಗರದಲ್ಲಿ ವಿಶಿಷ್ಟ ಜಲಸೇವೆ: ನೀರಿಗಾಗಿ ಕೈಜೋಡಿಸಿದ ಸರ್ವಧಮೀಯರು
ನೀರು ಪೂರೈಕೆಯಲ್ಲಿ ಕೋಮು ಸೌಹಾರ್ದತೆ ಮೆರೆದ ಗ್ರಾಮಸ್ಥರು

ಉಡುಪಿ, ಮೇ 14: ಇಡೀ ಗ್ರಾಮಕ್ಕೆ ಗ್ರಾಮವೇ ನೀರಿಗಾಗಿ ಹಾತೊರೆಯುತ್ತಿರುವ ಸಂದರ್ಭದಲ್ಲಿ ಕೊಡವೂರು ಲಕ್ಷ್ಮೀನಗರದ ಎಲ್ಲಧರ್ಮಿಯರು ಜಾತಿ ಮತಗಳ ಬೇಧವಿಲ್ಲದೆ ಅಗತ್ಯ ಇರುವವರಿಗೆ ನೀರು ಪೂರೈಸುವಲ್ಲಿ ಒಂದಾಗಿದ್ದಾರೆ. ಈ ಮೂಲಕ ಲಕ್ಷ್ಮೀನಗರದ ನಿವಾಸಿಗಳು ನೀರು ಹಂಚಿಕೆಯಲ್ಲಿ ಸೌಹಾದರ್ತೆ ಮೆರೆಯುತ್ತಿದ್ದಾರೆ.
ನೀರು ಪೂರೈಕೆಗೆ ಬೇಕಾದ ವಾಹನ, ಟ್ಯಾಂಕಿನ ವ್ಯವಸ್ಥೆಯನ್ನು ಹಿಂದೂಗಳು ಕಲ್ಪಿಸಿದರೆ, ಕ್ರಿಶ್ಚಿಯನ್, ಹಿಂದೂಗಳ ಮನೆಯ ಬಾವಿಯಿಂದ ನೀರು ಪಡೆದು ಮುಸ್ಲಿಮ್ ಚಾಲಕ ಆ ನೀರನ್ನು ಅಗತ್ಯ ಇರುವವರಿಗೆ ರಮಝಾನ್ ಉಪವಾಸ ವೃತ್ತ ಆಚರಣೆ ಮಧ್ಯೆಯೂ ಹಗಲಿರುಳು ಎನ್ನದೆ ಹಂಚಿಕೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಳೆದ 10-12 ದಿನಗಳಿಂದ ಇಡೀ ಲಕ್ಷ್ಮೀನಗರವೇ ಈ ರೀತಿಯ ಜಲಸೇವೆಯಲ್ಲಿ ತೊಡಗಿಸಿಕೊಂಡಿದೆ.
ಉಡುಪಿ ನಗರಸಭೆ ವ್ಯಾಪ್ತಿಯ ಕೊಡವೂರು ಗ್ರಾಮದ ಲಕ್ಷ್ಮೀನಗರದಲ್ಲಿ ಬಜೆಯಲ್ಲಿ ನೀರು ಖಾಲಿಯಾಗಿರುವ ದಿನದಿಂದ ನೀರಿನ ಸಮಸ್ಯೆ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ಲಕ್ಷ್ಮೀನಗರದ ಜಯ ಪೂಜಾರಿ ಎಂಬವರು ನೀಡಿದ ವಾಹನ ದಲ್ಲಿ ಸಿರಿ ಕುಮಾರ ಕ್ಷೇತ್ರದ ಸಂಸ್ಥೆ ನೀಡಿರುವ ಟ್ಯಾಂಕ್ ಮೂಲಕ ಚಾರ್ಲಿ ಮ್ಯಾಥ್ಯು, ಸಂಜೀವ ಪೂಜಾರಿ, ಸಚಿನ್ ಶೆಟ್ಟಿ ಸೇರಿದಂತೆ ಹಲವು ಮಂದಿ ನೀಡಿರುವ ಬಾವಿಯ ನೀರನ್ನು ಮುಹಮ್ಮದ್ ಆಸೀಫ್, ಲಕ್ಷ್ಮೀನಗರದ ಗರಡಿ, ಕಾಫಿ ಮಿಲ್, ಪಾಳೆಕಟ್ಟೆ ಪ್ರದೇಶಗಳ ಮನೆಮನೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ.
‘ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ವೇಳೆ ನೀರು ಪೂರೈಕೆ ಮಾಡಲಾಗುತ್ತಿದೆ. ನಿನ್ನೆ ಸುಮಾರು 50 ಮನೆಗಳಿಗೆ ನೀರು ಪೂರೈಕೆ ಮಾಡಲಾಗಿದೆ. ನೀರಿನ ಅಗತ್ಯದ ಬಗ್ಗೆ ಕರೆ ಬಂದ ಕೂಡಲೇ ನೀರು ಪೂರೈಸುವ ಕೆಲಸ ಮಾಡಲಾಗು ತ್ತಿದೆ. ಕುಡಿಯುವ ನೀರಿಗೆ ಜಾತಿ ಧರ್ಮ ಎಂಬುದಿಲ್ಲ. ನೀರು ಎಲ್ಲರಿಗೂ ಬೇಕಾಗಿದೆ. ನಮ್ಮ ಮನೆಯಲ್ಲೂ ನೀರಿನ ಸಮಸ್ಯೆ ಇದೆ. ಆದರೂ ಜನರಿಗಾಗಿ ನಮ್ಮಿಂದ ಸೇವೆ ಮಾಡುತ್ತಿದ್ದೇನೆ’ ಎಂದು ಮುಹಮ್ಮದ್ ಆಸೀಫ್ ಹೇಳಿದರು.
ಸೇವೆಗೆ ಅಡ್ಡಿಯಾಗದ ಉಪವಾಸ ವೃತ
ಮುಹಮ್ಮದ್ ಆಸೀಫ್ ಅವರಿಗೆ ನೀರಿನ ವಿಚಾರದಲ್ಲಿ ಜನರ ಸೇವೆ ಮಾಡಲು ರಮಝಾನ್ ಉಪವಾಸ ವೃತ್ತ ಆಚರಣೆ ಅಡ್ಡಿಯಾಗಲಿಲ್ಲ. ಬೆಳಗಿನ ಜಾವ ಸಹರಿ ಹಾಗೂ ಸಂಜೆಯ ಇಫ್ತಾರ್ ಮುಗಿಸಿ ಹೊರಡುವ ಆಸೀಫ್ ಮನೆ ಮನೆಗೆ ತೆರಳಿ ನೀರು ಸರಬರಾಜು ಮಾಡುತ್ತಿದ್ದಾರೆ. ಇವರೊಂದಿಗೆ ಚಾರ್ಲಿ ಮ್ಯಾಥ್ಯು ಕೂಡ ಕೈಜೋಡಿಸಿದ್ದಾರೆ.
ಹಣ್ಣಿನ ವ್ಯಾಪಾರ ನಡೆಸುತ್ತಿರುವ ಆಸೀಫ್ ಬೆಳಗಿನ ಜಾವ 4ಗಂಟೆಗೆ ಎದ್ದು ಸಹರಿ ಮುಗಿಸಿ ನಮಾಝ್ ನಿರ್ವಹಿಸಿ 6ಗಂಟೆ ಸುಮಾರಿಗೆ ಜಯ ಪೂಜಾರಿ ಅವರ ವಾಹನದಲ್ಲಿ ನೀರು ತುಂಬಿಸಿಕೊಂಡು ಮನೆಮನೆಗೆ ಪೂರೈಕೆ ಮಾಡುತ್ತಾರೆ. ಬೆಳಗ್ಗೆ 8ಗಂಟೆಯವರೆಗೆ ಈ ಸೇವೆಯನ್ನು ಮುಗಿಸಿ ಬಳಿಕ ತನ್ನ ವೃತ್ತಿಯನ್ನು ಮುಂದುವರೆಸುತ್ತಾರೆ.
ಸಂಜೆ ವೇಳೆ ಮತ್ತೆ ನೀರು ಪೂರೈಕೆಯಲ್ಲಿ ತೊಡಗಿಸಿಕೊಳ್ಳುವ ಆಸೀಫ್, ಇಫ್ತಾರ್‌ಗೆ ಸ್ವಲ್ಪ ಸಮಯ ತೆಗೆದುಕೊಂಡು ಬಳಿಕ ರಾತ್ರಿ 8:30ರವರೆಗೂ ನೀರು ಪೂರೈಸುವ ಕೆಲಸ ಮಾಡುತ್ತಿದ್ದಾರೆ.
‘ನೀರು ಪೂರೈಕೆ ಮಾಡುವ ವಾಹನಕ್ಕೆ ಬೇಕಾದ ಡಿಸೇಲ್‌ನ ಹಣವನ್ನು ಜನರಿಂದ ಸಂಗ್ರಹಿಸಲಾಗುತ್ತಿದೆ. ದಿನಕ್ಕೆ 7-10ಸಾವಿರ ಲೀಟರ್ ನೀರು ಸರಬ ರಾಜು ಮಾಡುತ್ತಿದ್ದೇವೆ. ಒಂದು ಕುಟುಂಬಕ್ಕೆ 300ಲೀಟರ್‌ನಷ್ಟು ನೀರು ನೀಡಲಾಗುತ್ತದೆ. ನಮ್ಮಲ್ಲಿ ಸುಮಾರು 300 ಮನೆಗಳಿದ್ದು, ನೀರಿನ ಅಭಾವ ತುಂಬಾ ಇದೆ.
- ಮಾಧವ ಬನ್ನಂಜೆ, ಸಾಮಾಜಿಕ ಕಾರ್ಯಕರ್ತ, ಕೊಡವೂರು








