ಜಲಜಾಗೃತಿಯೊಂದಿಗೆ ಉಚಿತ ಕುಡಿಯುವ ನೀರಿನ ವಿತರಣೆ

ಉಡುಪಿ, ಮೇ 14: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಉಡುಪಿ ಪಂಚರತ್ನ ಸೇವಾ ಟ್ರಸ್ಟ್ ಜಂಟಿಯಾಗಿ ಕುಡಿಯುವ ನೀರಿನ ಅಭಾವ ಇರುವ ಉಡುಪಿ ನಗರಸಭೆಯ ವ್ಯಾಪ್ತಿಯೊಳಗಿನ ಬಡಾವಣೆಗಳಲ್ಲಿ ಉಚಿತ ವಾಗಿ ಶುದ್ಧ ಕುಡಿಯುವ ನೀರಿನ ವಿತರಿಸುವ ಕಾರ್ಯವನ್ನು ಮಂಗಳವಾರ ಆರಂಭಿಸಿದೆ.
‘ಜೀವಜಲ ಅಮೂಲ್ಯ’ ’ನೀರನ್ನು ಮಿತವಾಗಿ ಬಳಸಿ’, ಎಂಬ ಘೋಷ ವಾಕ್ಯಗಳ ಫಲಕವನ್ನು ನೀರು ತುಂಬಿದ ವಾಹನಕ್ಕೆ ಅಳವಡಿಸಿಕೊಂಡು, ಜಲ ದಾನ ಮಾಡುವ ಜೊತೆಗೆ, ಸಾರ್ವಜನಿಕರಲ್ಲಿ ಜಲಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ.
ನೀರು ವಿತರಣಾ ಸೇವಾ ಕಾರ್ಯದಲ್ಲಿ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ರಾಜು ಕಾಪು, ಕೆ.ಬಾಲ ಗಂಗಾಧರ ರಾವ್, ಪಂಚರತ್ನ ಸೇವಾ ಟ್ರಸ್ಟಿನ ಉಪಾಧ್ಯಕ್ಷ ತಾರಾನಾಥ್ ಮೇಸ್ತ ಶಿರೂರು, ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳಬೆಟ್ಟು ಶ್ರಮದಾನ ಮಾಡುತ್ತಿದ್ದಾರೆ.
ಈ ಯೋಜನೆಗೆ ಉದ್ಯಮಿಗಳಾದ ಪುರುಷೋತ್ತಮ್ ಶೆಟ್ಟಿ, ಮನೋಹರ್ ಶೆಟ್ಟಿ, ಮಟ್ಟಾರು ಗಣೇಶ್ ಕಿಣಿ, ಪ್ರಕಾಶ್ ಪೈ ಬೀಡಿನಗುಡ್ಡೆ ಹಾಗೂ ಸಿದ್ಧಿ ವಿನಾಯಕ ಟ್ರಾನ್ಸಪೊರ್ಟ್ ಸಂಸ್ಥೆಯು ಬೇಕಾದ ಮೂಲ ಸೌಕರ್ಯಗಳ ಒದಗಿಸಿ ಸಹಕರಿಸುತ್ತಿದೆ. ಮಳೆ ಬರುವರೆಗೆ ಈ ನೀರು ವಿತರಣೆ ಕಾರ್ಯ ಮುಂದುವರಿಯಲಿದೆ ಎಂದು ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.





