7ನೆ ದಿನಕ್ಕೆ ಕಾಲಿಟ್ಟ ಒಕ್ಕಲಿಗರ ಸಂಘದ ಮುಷ್ಕರ

ಬೆಂಗಳೂರು, ಮೇ 14: ರಾಜ್ಯ ಒಕ್ಕಲಿಗರ ಸಂಘ ಎಂಪ್ಲಾಯಿಸ್ ಅಸೋಸಿಯೇಷನ್ ವತಿಯಿಂದ 6ನೆ ವೇತನಕ್ಕೆ ಆಗ್ರಹಿಸಿ ಸಾವಿರಾರು ನೌಕರರು ಒಕ್ಕಲಿಗರ ಸಂಘದ ಆಡಳಿತಾಧಿಕಾರಿ ಕಚೇರಿ ಮುಂದೆ ನಡೆಯುತ್ತಿರುವ ಮುಷ್ಕರ 7ನೆ ದಿನಕ್ಕೆ ಕಾಲಿಟ್ಟಿದೆ.
ರಾಜ್ಯ ಒಕ್ಕಲಿಗರ ಸಂಘದ ಅಧೀನ ವಿದ್ಯಾ ಸಂಸ್ಥೆಗಳಾದ ಕೆಂಪೇಗೌಡ ಮೆಡಿಕಲ್ ಕಾಲೇಜು, ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್, ಡೆಂಟಲ್ ಕಾಲೇಜು ಮತ್ತು ಶ್ರೀಗಂಧದ ಕಾವಲಿನ ವಿದ್ಯಾ ಸಂಸ್ಥೆಗಳಿಂದ ಸುಮಾರು 2 ಸಾವಿರ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ನಮಗೆ ಕಾನೂನಿನ ಪ್ರಕಾರ 6ನೆ ವೇತನವನ್ನು ಜಾರಿ ಮಾಡಬೇಕೆಂದು ಕಳೆದ 6 ತಿಂಗಳಿಂದ ಬೇಡಿಕೆ ಇಡುತ್ತಾ ಬರಲಾಗಿದೆ. ಆದರೂ ಒಕ್ಕಲಿಗರ ಸಂಘದ ಆಡತಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲವೆಂದು ನೌಕರರ ಸಂಘದ ಕಾರ್ಯದರ್ಶಿ ಆರ್.ರಂಗರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಬೇಡಿಕೆ ಈಡೇರುವವರಿಗೆ ಯಾವುದೆ ಕಾರಣಕ್ಕೂ ಮುಷ್ಕರವನ್ನು ಹಿಂಪಡೆಯುವುದಿಲ್ಲ. ಕೂಡಲೆ ಒಕ್ಕಲಿಗರ ಸಂಘದ ಪದಾಧಿಕಾರಿಗಳು 6ನೆ ವೇತನವನ್ನು ಜಾರಿ ಮಾಡುವ ಮೂಲಕ ನೌಕರರ ಹಿತವನ್ನು ಕಾಯಬೇಕೆಂದು ಅವರು ಪತ್ರಿಕಾ ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.





