ಪೇಜಾವರಶ್ರೀಗಳನ್ನು ಭೇಟಿಯಾದ ದೇವೇಗೌಡ

ಉಡುಪಿ, ಮೇ 14: ಕಾಪು ಸಮೀಪದ ಮೂಳೂರಿನ ಸಾಯಿರಾಧಾ ಹೆರಿಟೇಜ್ ರೆಸಾರ್ಟ್‌ನಲ್ಲಿ ಆಯುರ್ವೇದ ಚಿಕಿತ್ಸೆ ಹಾಗೂ ಪ್ರಕೃತಿ ಚಿಕಿತ್ಸೆಗಾಗಿ ಕಳೆದ ಆರು ದಿನಗಳಿಂದ ತಂಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇಂದು ಪತ್ನಿ ಚೆನ್ನಮ್ಮ ಅವರೊಂದಿಗೆ ಉಡುಪಿಯ ಶ್ರೀಕೃಷ್ಣ ಮಠ ಹಾಗೂ ಅಂಬಲಪಾಡಿಯಲ್ಲಿರುವ ಶ್ರೀಮಹಾಕಾಳಿ ಜನಾರ್ದನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳು ತಮ್ಮ ನಗರದ ಶ್ರೀಗೋವಿಂದ ಕಲ್ಯಾಣಮಂಟಪದಲ್ಲಿ ತಮ್ಮ ಜನ್ಮನಕ್ಷತ್ರದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರನ್ನು ಭೇಟಿಯಾಗಿ ಗೌರವ ಸಲ್ಲಿಸಿ ಅವರಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಪೇಜಾವರಶ್ರೀಗಳು, ದೇವೇಗೌಡರು ಪ್ರಧಾನ ಮಂತ್ರಿಯಾಗಿ ದೇಶಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಅವರು ಇನ್ನಷ್ಟು ಕಾಲ ಹುದ್ದೆಯಲ್ಲಿದ್ದಿದ್ದರೆ ಕಾಶ್ಮೀರ ಸಮಸ್ಯೆ ಬಗೆಹರಿಯುತ್ತಿತ್ತು. ಹಳ್ಳಿಯ ರೈತನ ಗುಣವನ್ನು ಇನ್ನೂ ಹೊಂದಿರುವ ಅವರಿಗೆ ಕೃಷ್ಣನ ಅನುಗ್ರಹ ಸದಾ ಇರಲಿ ಎಂದು ಹಾರೈಸಿದರು.
ದೇವೇಗೌಡ ಅವರು ಪ್ರಧಾನ ಮಂತ್ರಿಯಾಗಿದ್ದಾಗ, ಪೇಜಾವರ ಮಠಕ್ಕೆ ಆಗ ಹೊಸದಿಲ್ಲಿಯಲ್ಲಿ ಒಂದು ಎಕರೆ ಜಾಗವನ್ನು ನೀಡಿದ್ದರು. ಅಲ್ಲೀಗ ಕೃಷ್ಣ ಮಂದಿರ ಹಾಗೂ ಮಠಗಳನ್ನು ನಿರ್ಮಿಸಲಾಗಿದೆ ಎಂದೂ ಪೇಜಾವರಶ್ರೀಗಳು ಹೇಳಿದರು. ತಾವು ಯಾವುದೇ ರಾಜಕೀಯ ವಿಷಯಗಳನ್ನು ಚರ್ಚಿಸಲಿಲ್ಲ ಎಂದೂ ಅವರು ನುಡಿದರು.
ಭೇಟಿಯ ಕುರಿತು ದೇವೇಗೌಡರ ಪ್ರತಿಕ್ರಿಯೆಯನ್ನು ಕೇಳಿದಾಗ, ನಾನು ಸದಾ ಗೌರವಿಸುವ ಪೇಜಾವರಶ್ರೀಗಳು ಇಂದು 88ನೇ ಜನ್ಮನಕ್ಷತ್ರವನ್ನು ಆಚರಿಸುತಿದ್ದಾರೆ ಎಂದು ತಿಳಿದು ಅವರಿಗೆ ಗೌರವ ಸಮರ್ಪಿಸಲು ಹಾಗೂ ಅವರ ಆಶೀರ್ವಾದ ಪಡೆಯಲು ಆಗಮಿಸಿದ್ದೇನೆ ಎಂದರು.
ಆದರೆ ರಾಜಕೀಯ ಸೇರಿದಂತೆ ಬೇರೆ ಯಾವುದೇ ವಿಷಯದ ಕುರಿತು ಮಾತನಾಡಲು ಅವರು ಸ್ಪಷ್ಟವಾಗಿ ನಿರಾಕರಿಸಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಶ್ಯಾಲಿನಿ ಶೆಟ್ಟಿ ಕೆಂಚನೂರು, ಮಠದ ದಿವಾನರಾದ ರಘುರಾಮ ಆಚಾರ್ಯ, ವೈದ್ಯ ಡಾ.ತನ್ಮಯ ಗೋಸ್ವಾಮಿ, ವಿಷ್ಣುಮೂರ್ತಿ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.










