ಪೇಜಾವರ ಮಠದಿಂದ 12 ಮಂದಿಗೆ ಶ್ರೀರಾಮವಿಠಲ ಪ್ರಶಸ್ತಿ ಪ್ರದಾನ
ವಿಜಯನಾಥ ಶೆಣೈಗೆ ಮರಣೋತ್ತರ ‘ವಿಜಯಶ್ರೀ’ ಪ್ರಶಸ್ತಿ

ಉಡುಪಿ, ಮೇ 14: ಮಧ್ವ, ಮಾಧವ, ಮಾನವ ಈ ಮೂರು ಮಕಾರಗಳಲ್ಲಿ ನನಗೆ ಮಮಕಾರ. ಸಾಧಕರು ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂಬ ಹಾರೈಕೆಯಿಂದ ಪ್ರತೀ ವರ್ಷ ಜನ್ಮನಕ್ಷತ್ರದಂದು ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ಕಳೆದ 20 ವರ್ಷಗಳಿಂದ ನಿರಂತ ರವಾಗಿ ನಡೆಯುತ್ತಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಪೇಜಾವರ ಅಧೋಕ್ಷಜ ಮಠದ ವತಿಯಿಂದ ಪೇಜಾವರ ಶ್ರೀಗಳ ಜನ್ಮನಕ್ಷತ್ರದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿಜಯಶ್ರೀ ಹಾಗೂ ಶ್ರೀರಾಮವಿಠಲ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡುತಿದ್ದರು.
ಯಕ್ಷಗಾನ ಕರಾವಳಿಯ ವಿಶಿಷ್ಟ ಕಲೆಯಾಗಿದ್ದು, ಈ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲಾಗಿದೆ. ಇಂದು ಕಲಾವಿದರು ತಿಟ್ಟು ಬೇಧವಿಲ್ಲದೇ ಜನಪ್ರಿಯರಾಗುತಿದ್ದಾರೆ. ಚಂಡೆ-ಮದ್ದಲೆಗಳ ನಾಧ ಸಂಯೋಜನೆ ಮನಸ್ಸಿಗೆ ಮುದ ನೀಡುತ್ತದೆ ಎಂದು ಸ್ವಾಮೀಜಿ ನುಡಿದರು.
‘ವಿಜಯಶ್ರೀ’ ಪ್ರಶಸ್ತಿ ಪಡೆದ ಮಣಿಪಾಲದ ವಿಜಯನಾಥ ಶೆಣೈ ಸಾಂಸ್ಕೃತಿಕ ಕ್ಷೇತ್ರಕ್ಕೆ ಅನನ್ಯ ಕೊಡುಗೆ ಸಲ್ಲಿಸಿದ್ದು, ಪ್ರಾಚೀನ ಶಿಲ್ಪಕಲೆಗಳ ಸಂರಕ್ಷಣೆ ಮಹತ್ವದ ಕೆಲಸವಾಗಿದೆ. ಹೀಗಾಗಿ ಉಡುಪಿಯಲ್ಲಿ ಅವರ ನೆನಪು ಚಿರಸ್ಥಾಯಿಯಾಗಲಿದೆ ಎಂದರು.
25 ಸಾವಿರ ರೂ. ನಗದು ಹಾಗೂ ಫಲಕವನ್ನು ಒಳಗೊಂಡ ವಿಜಯಶ್ರೀ ಪ್ರಶಸ್ತಿಯನ್ನು ಮಣಿಪಾಲ ಹೆರಿಟೇಜ್ ವಿಲೇಜ್‌ನ ನಿರ್ಮಾತೃ ದಿ. ವಿಜಯನಾಥ್ ಶೆಣೈ ಅವರಿಗೆ ಮರಣೋತ್ತರವಾಗಿ ನೀಡಿದ್ದು, ಅದನ್ನು ಪತ್ನಿ ಮಂಜುಳಾ ವಿ. ಶೆಣೈ ಅವರಿಗೆ ನೀಡಿ ಗೌರವಿಸಲಾಯಿತು.
10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡ ಶ್ರೀರಾಮವಿಠಲ ಪ್ರಶಸ್ತಿಯನ್ನು ಯಕ್ಷಗಾನದಲ್ಲಿ ಬೇಗಾರು ಶಿವಕುಮಾರ್, ದಿವಾಕರ ರೈ ಸಂಪಾಜೆ, ಚಂದ್ರಶೇಖರ ಧರ್ಮಸ್ಥಳ ಮತ್ತು ಶಶಿಕಾಂತ್ ಶೆಟ್ಟಿ ಕಾರ್ಕಳ, ವೈದ್ಯಕೀಯದಲ್ಲಿ ಡಾ. ಜಯಂತ್ ಭಟ್, ನೃತ್ಯದಲ್ಲಿ ಲಕ್ಷ್ಮೀ ಗುರುರಾಜ್, ಛಾಯಾಗ್ರಹಣದಲ್ಲಿ ಆಸ್ಟ್ರೋಮೋಹನ್, ಶಾಸ್ತ್ರೀಯ ಸಂಗೀತದಲ್ಲಿ ರಾಘವೇಂದ್ರ ರಾವ್, ಪಾಕಶಾಸ್ತ್ರದಲ್ಲಿ ಪಿ. ಲಕ್ಷ್ಮೀನಾರಾಯಣ ಭಟ್, ಸಾಹಿತ್ಯದಲ್ಲಿ ಎಚ್. ಶಾಂತರಾಜ ಐತಾಳ್, ಚಿತ್ರಕಲೆಯಲ್ಲಿ ಸುಬ್ರಹ್ಮಣ್ಯ ರಾವ್ ಹಾಗೂ ವಾದ್ಯ ಸಂಗೀತದಲ್ಲಿ ಉಡುಪಿ ಜನಾರ್ದನ್ ಅವರಿಗೆ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಪೇಜಾವರಶ್ರೀಗಳ ಪಾದಕಾಣಿಕೆಯಲ್ಲಿ ಸಂಗ್ರಹವಾದ ಮೊತ್ತದಲ್ಲಿ ಅಶಕ್ತ ರೋಗಿಗಳಿಗೆ ವೈದ್ಯಕೀಯ ನೆರವು ಹಸ್ತಾಂತರಿ ಸಲಾಯಿತು. ರಾಮಚಂದ್ರ ಉಪಾಧ್ಯ ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಎಚ್.ಎನ್. ಶೃಂಗೇಶ್ವರ್ ವಂದಿಸಿದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಬಡಗುತಿಟ್ಟು ಕಲಾವಿದರಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನಗೊಂಡಿತು.







