ಮೇ ಅಂತ್ಯದವರೆಗೆ ನೀರು ಪೂರೈಕೆಗಾಗಿ ರೇಷನಿಂಗ್‌ಗೆ ಆದ್ಯತೆ

ಉಡುಪಿ, ಮೇ 14: ಉಡುಪಿ ನಗರಸಭೆ ವ್ಯಾಪ್ತಿಯ ಒಂದನೆ ವಿಭಾಗಕ್ಕೆ ಇಂದು ನೀರು ಪೂರೈಕೆ ಮಾಡಲಾಗಿದ್ದು, ನೀರು ಬಾರದ ಬಗ್ಗೆ ಒಟ್ಟು 23 ದೂರುಗಳು ನಗರಸಭೆಗೆ ಬಂದಿವೆ. ಈ ಹಿನ್ನೆಲೆಯಲ್ಲಿ ದೂರು ಬಂದ ಮಣಿ ಪಾಲ, ಕೊಡವೂರು, ನಿಟ್ಟೂರು, ಕಿನ್ನಿಮುಲ್ಕಿ, ಮೂಡುಪೆರಂಪಳ್ಳಿ ಪ್ರದೇಶಗಳಿಗೆ ಒಟ್ಟು ಆರು ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗಿದೆ.
ನೀರು ಪೂರೈಕೆ ಮಾಡುವ ಬಜೆ ಡ್ಯಾಂ ಹಾಗೂ ಡ್ರೆಡ್ಜಿಂಗ್ ಪ್ರದೇಶಗಳಿಗೆ ಉಡುಪಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್, ಪೌರಾಯುಕ್ತ ಆನಂದ ಕಲ್ಲೋಳಿಕರ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅದೇ ರೀತಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಕೂಡ ಬಜೆ ಡಾ್ಯಂ ಪ್ರದೇಶಗಳಿಗೆ ಭೇಟಿ ನೀಡಿದರು.
ನಾಲ್ಕು ಕಡೆಗಳಲ್ಲೂ ಡ್ರೆಡ್ಜಿಂಗ್ ಕಾರ್ಯ ಮುಂದುವರೆದಿದ್ದು, ನೀರು ಜಾಕ್ ವೆಲ್‌ಗೆ ಹರಿದುಕೊಂಡು ಬರುತ್ತಿದೆ. ಅದರಂತೆ ನೀರನ್ನು ಪಂಪಿಂಗ್ ಮಾಡ ಲಾಗುತ್ತಿದೆ. ಇಂದು ಬೆಳಗ್ಗೆ 7ಗಂಟೆಯಿಂದ ಮಧ್ಯಾಹ್ನದವರೆಗೆ ಮತ್ತು ಮಧ್ಯಾಹ್ನ 3ಗಂಟೆಯಿಂದ 5:30ರವರೆಗೆ ಪಂಪಿಂಗ್ ಮಾಡಲಾ ಗಿದೆ. ಇದೇ ರೀತಿ ಆರು ವಿಭಾಗಗಳಿಗೆ ರೇಷನಿಂಗ್ ಮೂಲಕ ನೀರು ಸರಬರಾಜು ಮಾಡಿದರೆ ಮೇ ಅಂತ್ಯದವರೆಗೆ ನೀರು ಸರಬರಾಜು ಮಾಡಬಹುದಾಗಿದೆ ಎಂದು ಸಂತೋಷ್ ಕುಮಾರ್ ತಿಳಿಸಿದ್ದಾರೆ.
ನಾಳೆ ನೀರು ಪೂರೈಕೆ ಪ್ರದೇಶ: ಎರಡನೆ ವಿಭಾಗದ ದೊಡ್ಡಣಗುಡ್ಡೆ, ಕರಂಬಳ್ಳಿ, ಜನತಾ ಕಾಲೋನಿ, ನೇಕಾರರ ಕಾಲೋನಿ, ವಿ.ಎಂ.ನಗರ, ರೈಲ್ವೆ ಸೇತುವೆವರೆಗೆ, ಪೊಲೀಸ್ ವಸತಿಗೃಹ, ಚಕ್ರತೀರ್ಥ, ಪಾಡಿಗಾರು ಮಠ, ಗುಂಡಿಬೈಲು ಶಾಲಾ ವಠಾರ, ಕಲ್ಸಂಕ ಗುಂಡಿಬೈಲು ರೋಡ್, ಅಡ್ಕದಕಟ್ಟೆ, ನಿಟ್ಟೂರು, ವಿಷ್ಣುಮೂರ್ತಿನಗರ, ಕಡಿಯಾಳಿ, ಕೆಇಬಿ ವಸತಿಗೃಹ, ಕಾತ್ಯಾಯಿನಿ ನಗರ, ಎಂಜಿಎಂ ವಸತಿಗೃಹ, ಸಗ್ರಿ ರೈಲ್ವೆ ಸೇತುವೆವರೆಗೆ, ಗೋಪಾಲಪುರ, ನಯಂಪಳ್ಳಿ, ಸಂತೆಕಟ್ಟೆ, ಸುಬ್ರಹ್ಮಣ್ಯ ನಗರ, ಅಂಬಾಗಿಲು, ಕಕ್ಕುಂಜೆ, ಪ್ರಭಾಕರ್ ಲೇಔಟ್, ಕುದುರೆ ಕಲ್ಸಂಕವರೆಗೆ, ನಿಟ್ಟೂರು ಶಾಲೆ ಬಳಿ ಹನುಮಂತ ನಗರಗಳಿಗೆ ಮೇ 15ರಂದು ನೀರು ಸರಬರಾಜು ಮಾಡಲಾಗುತ್ತದೆ.
ಈ ಪ್ರದೇಶಗಳಲ್ಲಿ ನೀರು ಸರಬರಾಜು ಆಗದೆ ಇರುವ ಮನೆಗಳ ದೂರನ್ನು ಪರಿಶೀಲಿಸಿ ಟ್ಯಾಂಕರ್ ಮೂಲಕ ಮರುದಿನ ಆದ್ಯತೆ ಮೇರೆಗೆ ನೀರು ಸರಬ ರಾಜು ಮಾಡಲಾಗುವುದು. ಬೆಳಗ್ಗೆ ಅವಶ್ಯವಿರುವ ನೀರಿನ ಪ್ರಮಾಣ ಲಭ್ಯತೆ ಇಲ್ಲದಿದ್ದಲ್ಲಿ ಅಪರಾಹ್ನದ ನಂತರ ನೀರು ಸರಬರಾಜು ಮಾಡಲಾಗುವುದು ಎಂದು ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








