ಶಿರೂರು ಅಣೆಕಟ್ಟು ಬಳಿಕ ನೀರಿನ ಹರಿವಿಗೆ ಅಡೆತಡೆ: ತೆರವಿಗೆ ಜಿಲ್ಲಾಡಳಿತಕ್ಕೆ ಶಾಸಕರ ಮನವಿ

ಉಡುಪಿ, ಮೇ 14: ಉಡುಪಿ ನಗರಕ್ಕೆ ಕುಡಿಯುವ ನೀರು ನೀಡುವ ಬೆ ಅಣೆಕಟ್ಟಿಗೆ ನೀರು ಹರಿದು ಬರುವ ಸ್ಥಳವಾದ ಶೀರೂರು ಮಠದ ಬಳಿ ಹೊಯ್ಗೆ ಗುಂಡಿಯ ಹತ್ತಿರ ಅಲ್ಲಲ್ಲಿ ನೀರಿನ ಮಧ್ಯೆ ಪೊದೆಗಳು ಬೆಳೆದಿದ್ದು, ಇದರಿಂದ ಮಳೆಗಾಲದಲ್ಲಿ ನೀರಿನ ಸರಾಗ ಹರಿವಿಗೆ ತಡೆಯುಂಟಾ ಗುವ ಸಾಧ್ಯತೆ ಇದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಬಜೆ ಅಣೆಕಟ್ಟಿನಿಂದ ಶಿರೂರು ಅಣೆಕಟ್ಟಿನ ನಡುವಿನ ಪ್ರದೇಶಗಳಿಗೆ ಭೇಟಿ ನೀಡಿದಾಗ ಸ್ವರ್ಣ ನದಿಯ ನೀರು ಹರಿಯುವ ಜಾಗದಲ್ಲಿ ಅಲ್ಲಲ್ಲಿ ದೊಡ್ಡ ಪೊದೆಗಳು ಬೆಳೆದುಕೊಂಡಿದ್ದು, ಅವು ದೊಡ್ಡ ದೊಡ್ಡ ಮರಗಳಂತೆ ಅಡ್ಡಾದಿಡ್ಡಿಯಾಗಿ ಬೆಳೆದಿರುವುದು ಕಂಡುಬರುತ್ತದೆ. ಇಂತಹ ಅಡೆತಡೆ ಗಳಿಂದ ಬೇಸಿಗೆಯ ಕಾಲದಲ್ಲಿ ನೀರು ಶೇಖರಣೆಯಾಗದೇ ಸಮಸ್ಯೆ ಉಂಟಾದರೆ, ಮಳೆಗಾಲದಲ್ಲಿ ನೀರು ಹರಿದುಹೋಗಲು ಸರಿಯಾದ ವ್ಯವಸ್ಥೆ ಇಲ್ಲದೇ ನೆರೆ ಉಂಟಾಗುವ ಸಾಧ್ಯತೆಗಳು ಕಂಡುಬರುತ್ತಿವೆ ಎಂದವರು ಕಳವಳ ವ್ಯಕ್ತಪಡಿಸಿದರು.
ಕಳೆದ ಐದಾರು ವರ್ಷಗಳಿಂದ ಈ ಪ್ರದೇಶದಲ್ಲಿ ಯಾವುದೇ ರೀತಿಯ ಹೂಳೆತ್ತುವ ಕಾರ್ಯ ನಡೆದಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದುದರಿಂದ ಜಿಲ್ಲಾಡಳಿತ ಈ ಬಗ್ಗೆ ಕೂಡಲೇ ಗಮನ ಹರಿಸಿ ಹೂಳೆತ್ತುವ ಹಾಗೂ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಶೀಘ್ರವೇ ಮುಂದಾಗ ಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಇಂದು ಡ್ರೆಡ್ಜಿಂಗ್ ನಡೆಯುವ ಪುತ್ತಿಗೆ ಸೇತುವೆ ಹಾಗೂ ಮಾಣೈ ಸೇತುವೆ ಬಳಿಗೆ ಭೇಟಿ ನೀಡಿದ ಅವರು ನೀರು ಪಂಪಿಂಗ್ ನಡೆಯುವುದನ್ನು ಪರಿಶೀಲಿಸಿದರು. ಬಜೆ ಅಣೆಕಟ್ಟಿನ ಪಂಪಿಂಗ್ ಪ್ರದೇಶದಲ್ಲೂ ತುಂಬಿಕೊಂಡಿರುವ ಹೂಳು ಮತ್ತು ಕೆಸರನ್ನು ತೆಗೆಯುವ ಕಾರ್ಯ ಇಂದು ಸಹ ಮುಂದುವರಿದಿದೆ ಎಂದವರು ತಿಳಿಸಿದರು.









