ದೈವಪಾತ್ರಿಗೆ ಹಲ್ಲೆ ಪ್ರಕರಣ: ದೈವಪಾತ್ರಿ ಸಹಿತ ಆರು ಮಂದಿ ಬಂಧನ
ಮಂಗಳೂರು, ಮೇ 14: ಸಲಿಂಗಕಾಮ ಆರೋಪದಡಿ ದೈವಪಾತ್ರಿಯೊಬ್ಬರಿಗೆ ನಾಗರಿಕರು ಸೇರಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನ ಮೇಲೆ ಹಲ್ಲೆ ನಡೆಸಿದ ಐದು ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಲೈಂಗಿಕ ಆರೋಪದ ಕುರಿತು ತಪ್ಪೊಪ್ಪಿಕೊಂಡ ದೈವಪಾತ್ರಿ ಲೋಕೇಶ್ ಪೂಜಾರಿ (42)ಯನ್ನೂ ಬಂಧಿಸಿದ್ದಾರೆ.
ಕುಳಾಯಿಯ 19 ವರ್ಷ ಪ್ರಾಯದ ಯುವಕನೊಂದಿಗೆ ದೈವಪಾತ್ರಿ ಲೋಕೇಶ್ ಪೂಜಾರಿ ಸಲಿಂಗ ಕಾಮದಲ್ಲಿ ತೊಡಗಿದ್ದಾಗಿ ಆರೋಪಿಸಿ ಅಳಕೆ ಬಳಿ ನಾಗರಿಕರು ಆತನ ಮೇಲೆ ಹಲ್ಲೆ ನಡೆಸಿದ್ದರು. ಆತನ ಕೈಕಡಗ ತೆಗೆದು ಹಾಕಿದ್ದಲ್ಲದೆ, ಕೂದಲು ಕತ್ತರಿಸಿದ್ದರು. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ದೈವಪಾತ್ರಿಯ ವಿರುದ್ಧ ದೂರು ನೀಡುವುದು ಬಿಟ್ಟು ಕಾನೂನು ಕೈಗೆತ್ತಿಕೊಂಡು ಆತನ ಹಲ್ಲೆ ನಡೆಸಿದ್ದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಹಲ್ಲೆ ನಡೆಸಿದವರ ವಿರುದ್ಧ ಸ್ವಯಂ ಪ್ರೇರಿತವಾಗಿ ಬರ್ಕೆ ಠಾಣೆಯಲ್ಲಿ ದೂರು ದಾಖಲಿಸಿತ್ತು. ತನಿಖೆ ಬಳಿಕ ಹಲ್ಲೆ ನಡೆಸಿದ ಐದು ಮಂದಿಯನ್ನು ಬಂಧಿಸಿದ್ದಾರೆ. ಇನ್ನೂ ಹಲವರು ಹಲ್ಲೆ ನಡೆಸಿದ ಶಂಕೆಯಿದ್ದು, ಅವರ ಬಂಧನಕ್ಕೂ ಬಲೆ ಬೀಸಿದ್ದಾರೆ.
ಈ ನಡುವೆ ಹಲ್ಲೆಗೊಳಗಾದ ದೈವಪಾತ್ರಿ ಲೋಕೇಶ್ ಪೂಜಾರಿಯ ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದರಿಂದ ಆತನನ್ನೂ ಬಂಧಿಸಿ ಸೆಕ್ಷನ್ 377ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.







