ಬಿಜೆಪಿಯಿಂದ ನಾರಾಯಣಗೌಡ 10 ಕೋಟಿ ಪಡೆದಿದ್ದಾರೆ: ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಆರೋಪ

ಮಂಡ್ಯ, ಮೇ 14: ಆಪರೇಷನ್ ಕಮಲಕ್ಕೆ ಕೆ.ಆರ್.ಪೇಟೆ ಜೆಡಿಎಸ್ ಶಾಸಕ ಕೆ.ಸಿ.ನಾರಾಯಣಗೌಡ ಬಿಜೆಪಿಯಿಂದ 10 ಕೋಟಿ ರೂ. ಪಡೆದಿದ್ದಾರೆಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಆರೋಪಿಸಿದ್ದಾರೆ.
ಮಂಗಳವಾರ ಕೆ.ಆರ್.ಪೇಟೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಚಂದ್ರಶೇಖರ್, ಮೇ 23 ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ನಾರಾಯಣಗೌಡ ಮುಂಬೈಗೆ ಹೊರಟು ಹೋಗುತ್ತಾರೆಂದು ಆರೋಪಿಸಿದರು.
ಬಿಜೆಪಿ ಆಪರೇಷನ್ ಕಮಲಕ್ಕೆ ನಾರಾಯಣಗೌಡಗೆ ಹಣ ಕೊಡಲಾಗಿತ್ತು. ಆದರೆ, ಆಪರೇಷನ್ ವಿಫಲವಾಗಿತ್ತು. ಈಗ ಉಳಿಕೆ ಹಣ ಕೊಟ್ಟರೆ ಬಾಂಬೆಗೆ ಹೊಗೋದಾಗಿ ನಾರಾಯಣಗೌಡ ಹೇಳುತ್ತಿದ್ದಾರಂತೆ. ಈ ಬಗ್ಗೆ ಬಿಜೆಪಿಯ ಸ್ನೇಹಿತರು ನನಗೆ ಹೇಳಿದರು ಎಂದು ಚಂದ್ರಶೇಖರ್ ತಿಳಿಸಿದರು.
ಲೋಕಸಭೆ ಚುನಾವಣೆ ಫಲಿತಾಂಶ ಬಂದ ತಕ್ಷಣ ಈತನನ್ನು ಬಿಜೆಪಿಯವರು ಎಲ್ಲಿಗೆ ಎತ್ತಿಕೊಂಡು ಹೋಗುತ್ತಾರೆ ಗೊತ್ತಿಲ್ಲ. ಕೆ.ಆರ್.ಪೇಟೆ ಪುರಸಭೆ ಚುನಾವಣೆಗೂ ನಾರಾಯಣಗೌಡ ಇರುವುದಿಲ್ಲ ಎಂದು ಅವರು ದೂರಿದರು. ನಾರಾಯಣಗೌಡ ಹುಟ್ಟು ಗೂಂಡಾ. ಕೆಆರ್ ಪೇಟೆ ಜನರ ಮಾನ, ಮರ್ಯಾದೆಯನ್ನೆಲ್ಲ ಹರಾಜು ಹಾಕಿಬಿಟ್ಟ. ಅವನ ಚರಿತ್ರೆ ತಿಳಿಯಬೇಕು ಅಂದರೆ ನೀವು ಬಾಂಬೆಗೆ ಹೋಗಬೇಕು. ಒಂದಾ, ಎರಡಾ, ನೂರಾರು ಕೆಟ್ಟ ಕೆಲಸ ಮಾಡಿದ್ದಾನೆ ಎಂದು ಅವರು ಏಕವಚನದಲ್ಲೇ ಕಿಡಿಕಾರಿದರು.
ಯಾರದೋ ಜಮೀನನ್ನು ನಾರಾಯಣಗೌಡ ಭೋಗ್ಯಕ್ಕೆ ಹಾಕಿಸಿಕೊಂಡಿದ್ದಾನೆ. ಇದನ್ನು ನೋಡಿದರೆ ಆತ ಯಾವ ಮಟ್ಟದ ಕ್ರಿಮಿನಲ್ ಎಂದು ಲೆಕ್ಕ ಹಾಕಿ. ಇಂಥವನಿಗೆ ನಾನು ಉತ್ತರ ಕೊಡಬೇಕಾ? ಕೆಆರ್ ಪೇಟೆಯಲ್ಲಿ ಗೂಂಡಾ ಆಡಳಿತ ಇದೆ ಎಂದೂ ಅವರು ಆಪಾದಿಸಿದರು.
ನಮ್ಮಲ್ಲಿ ಮುಖ್ಯಮಂತ್ರಿ ಆಗಲು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಿಕೆ.ಶಿವಕುಮಾರ್ ಇದ್ದಾರೆ. ಮುಂದೆ ಚುನಾವಣೆ ಆದ ಮೇಲೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕು ಅಂದರೆ ತಪ್ಪೇನು? ಅಂತಿಮವಾಗಿ ರಾಹುಲ್ ಗಾಂಧಿ ಯಾರು ಸಿಎಂ ಆಗಬೇಕು ಎಂದು ನಿರ್ಧರಿಸುತ್ತಾರೆ. ನಮ್ಮ ಪಕ್ಷದ ಬಗ್ಗೆ ಯಾರು ಚಕಾರ ಎತ್ತುವ ರೀತಿ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಒಂದೇ ಒಂದು ಹಗರಣಕ್ಕೆ ಸಿಲುಕದೇ ಪ್ರಾಮಾಣಿಕವಾಗಿ ಆಡಳಿತ ನಡೆಸಿದ್ದಾರೆ. ಚುನಾವಣೆ ಸಮಯದಲ್ಲಿ ತಾವು ಕೊಟ್ಟ ಎಲ್ಲಾ ಆಶ್ವಾಸನೆ ಈಡೇರಿಸಿದ ಯಾವನಾದರೂ ಒಬ್ಬ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ ಎಂದು ಅವರು ಸಮರ್ಥಿಸಿಕೊಂಡರು.
ಮೈತ್ರಿ ಸರಕಾರ ನನ್ನ ಬಾಯಿ ಕಟ್ಟಿಹಾಕಿದೆ ಎಂಬುದಾಗಿ ಸಿದ್ದರಾಮಯ್ಯ ಸರಿಯಾಗಿಯೇ ಟ್ವೀಟ್ ಮಾಡಿದ್ದಾರೆ. ವಿಶ್ವನಾಥ್ ಮೊದಲಿನಿಂದಲೂ ತಮಟೆ ಹೊಡೆಯುತ್ತಿದ್ದಾರೆ. ವಿಶ್ವನಾಥ್ ಅಂಥವರ ಮಾತಿಗೆ ಬೆಲೆ ಕೊಡುವ ಜನ ಈ ರಾಜ್ಯದಲ್ಲಿ ಇಲ್ಲ. ಜೆಡಿಎಸ್ ಪಕ್ಷದಲ್ಲಿ ಅವರನ್ನು ಗೊಂಬೆ ಮಾಡಿಕೊಂಡು ಕೂರಿಸಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.







