ಮೊದಲ ಬಾರಿ ಅಧಿಕಾರಿಗಳ ಪ್ರವೇಶ ಪರೀಕ್ಷೆ ನಡೆಸಲಿರುವ ನೌಕಾಪಡೆ

ಹೊಸದಿಲ್ಲಿ,ಮೇ.14: ಭಾರತೀಯ ನೌಕಾಪಡೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಅಧಿಕಾರಿಗಳ ನೇರ ಆಯ್ಕೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲು ನೌಕಾಪಡೆ ನಿರ್ಧರಿಸಿದೆ. ಮೊದಲ ಭಾರತೀಯ ನೌಕಾಪಡೆ ಪ್ರವೇಶ ಪರೀಕ್ಷೆ (ಅಧಿಕಾರಿಗಳು) ಅಂದರೆ ಐಎನ್‌ಇಟಿ(ಅಧಿಕಾರಿಗಳು) ಯನ್ನು 2019ರ ಸೆಪ್ಟೆಂಬರ್‌ನಲ್ಲಿ ದೇಶದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ನೌಕಾಪಡೆ ಪ್ರಕಟನೆಯಲ್ಲಿ ತಿಳಿಸಿದೆ.
ಯುಪಿಎಸ್ಸಿ ಅಥವಾ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ ಬರೆಯದ ಇತರ ಎಲ್ಲ ಪದವೀಧರ ಅಭ್ಯರ್ಥಿಗಳನ್ನು ನೌಕಾಪಡೆಯಲ್ಲಿ ಶಾಶ್ವತ ನೇಮಕ ಅಥವಾ ಅಲ್ಪಕಾಲೀನ ಸೇವೆಗಾಗಿ ಆಯ್ಕೆ ಮಾಡಲು ಐಎನ್‌ಇಟಿ(ಅಧಿಕಾರಿಗಳು)ಯನ್ನು ಬಳಸಲಾಗುವುದು. ಸದ್ಯ, ಅಧಿಕಾರಿ ಅಭ್ಯರ್ಥಿಗಳನ್ನು ಪದವೀಧರ ಅಥವಾ ಸ್ನಾತಕೋತರ ಪದವಿಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಸೇವೆಗಳ ಆಯ್ಕೆ ಮಂಡಳಿ (ಎಸ್‌ಎಸ್‌ಬಿ) ಸಂದರ್ಶನಕ್ಕೆ ಅಂತಿಮಗೊಳಿಸಲಾಗುತ್ತಿತ್ತು. ಇನ್ನು ಮುಂದೆ ಐಎನ್‌ಇಟಿ(ಅಧಿಕಾರಿಗಳು)ಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಎಸ್‌ಎಸ್‌ಬಿಗೆ ಹೆಸರನ್ನು ಅಂತಿಮಗೊಳಿಸಲಾಗುವುದು.
ನೂತನ ಪರಿಕಲ್ಪನೆಯಲ್ಲಿ ಪ್ರತಿ ಆರು ತಿಂಗಳಿಗೆ ಒಂದೇ ಜಾಹೀರಾತನ್ನು ಪ್ರಕಟಿಸಲಾಗುವುದು ಮತ್ತು ಅರ್ಜಿದಾರರು ತಾವು ಪ್ರವೇಶ ಪಡೆಯಲು ಬಯಸುವ ಸ್ಥಾನಗಳಿಗೆ ತಮ್ಮ ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿ ಅರ್ಜಿಗಳನ್ನು ಹಾಕಬೇಕು. ಸ್ಥಾನಗಳ ವಿವರ, ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆಯ ಮಾಹಿತಿ ನಲ್ಲಿ ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.





