ಪಿಎನ್‌ಬಿ, ಕೆನರಾ ಬ್ಯಾಂಕ್ ಜೊತೆ ಸಣ್ಣ ಬ್ಯಾಂಕ್‌ಗಳು ವಿಲೀನ

ಹೊಸದಿಲ್ಲಿ,ಮೇ.14: ಭವಿಷ್ಯದಲ್ಲಿ ದೇಶದ ಮಧ್ಯಮ ಮತ್ತು ಸಣ್ಣ ಸರಕಾರಿ ಬ್ಯಾಂಕ್‌ಗಳನ್ನು ಪಂಜಾಬ್ ನ್ಯಾಶನಲ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್‌ನೊಂದಿಗೆ ವಿಲೀನ ಮಾಡಲಾಗುವುದು ಎಂದು ವಿತ್ತ ಸಚಿವಾಲಯದ ಇಬ್ಬರು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಮಧ್ಯಮ ಗಾತ್ರ ಬ್ಯಾಂಕ್‌ಗಳಲ್ಲಿ, ಅಲಹಾಬಾದ್ ಬ್ಯಾಂಕ್, ಆಂಧ್ರ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಯುಕೊ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸೇರಿದೆ. ಈ ಬ್ಯಾಂಕ್‌ಗಳ ಜೊತೆ ಪಿಎನ್‌ಬಿ ಮತ್ತು ಕೆನರಾ ಬ್ಯಾಂಕ್ ಪ್ರತ್ಯೇಕವಾಗಿ ವಿಲೀನ ಪ್ರಕ್ರಿಯೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಗೊಳಿಸುವ ಪ್ರಕ್ರಿಯೆ ಈಗಾಗಲೇ ನಡೆಯುತ್ತಿರುವುದರಿಂದ ಎರಡನೇ ಹಂತದ ವಿಲೀನ ಪ್ರಕ್ರಿಯೆ ಮುಂದಿನ ನಡೆಯಲಿದೆ ಎಂದು ವರದಿ ತಿಳಿಸಿದೆ. ಈಗಾಗಲೇ ತನ್ನ ಸಹಚರ ಬ್ಯಾಂಕ್‌ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ದೇಶದ ಅತಿದೊಡ್ಡ ಸಾಲದಾತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸದ್ಯದ ಮಟ್ಟಿಗೆ ವಿಲೀನ ಪ್ರಕ್ರಿಯೆಯಿಂದ ದೂರವುಳಿಯಲಿದೆ.





