'ತಂದೆ ತಾಯಿಯನ್ನು ಹೊರಹಾಕಿ, ಮನೆಯನ್ನು ಧ್ವಂಸ ಎಲ್ಲಾ ಆರೋಪಗಳು ಸುಳ್ಳು'
ಸಹೋದರನ ಚಿತಾವಣೆಯಿಂದ ವಯೋವೃದ್ಧರ ದುರ್ಬಳಕೆ- ಪುತ್ರರ ಸ್ಪಷ್ಟನೆ
ಪುತ್ತೂರು: ಕೆದಿಲ ಗ್ರಾಮದ ಬೀಟಿಗೆ ಎಂಬಲ್ಲಿ ಮಕ್ಕಳು ತಂದೆ ತಾಯಿಯನ್ನು ಮನೆಯಿಂದ ಹೊರಹಾಕಿ ಮನೆಯನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಲಾದ ಘಟನೆ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ನಾವು ತಂದೆಯನ್ನು ಹೊರಹಾಕಿಲ್ಲ ಹಾಗೂ ಮನೆಯನ್ನು ಧ್ವಂಸ ಮಾಡಿಲ್ಲ. ನಮ್ಮ ಸಹೋದರ ಇಸ್ಮಾಯಿಲ್ ಎಂಬವರು ತಂದೆ ತಾಯಿಯನ್ನು ದುರುಪಯೋಗ ಪಡಿಸಿಕೊಂಡು ಈ ದೂರು ನೀಡಿದ್ದಾರೆ ಎಂದು ಕೆದಿಲ ಮಹಮ್ಮದ್ ಅವರ ಪುತ್ರರಾದ ತಾಜುದ್ದೀನ್ ಮತ್ತು ಸಂಶುದ್ದೀನ್ ಅವರು ಸ್ಪಷ್ಟನೆ ನೀಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಆರೋಪಕ್ಕೆ ಸಂಬಂಧಿಸಿ ಇಸ್ಮಾಯಿಲ್ ಕರೆಯುವ ಯಾವುದೇ ಮಸೀದಿ ಅಥವಾ ದರ್ಗಾದಲ್ಲಿ ಸತ್ಯ ಪ್ರಮಾಣ ಮಾಡಲು ನಾವು ಸಿದ್ಧರಾಗಿದ್ದೇವೆ. ಪವಿತ್ರವಾದ ರಂಝಾನ್ ತಿಂಗಳಿನಲ್ಲಿ ಇಂತಹ ಅನ್ಯಾಯವನ್ನು ನಾವು ಯಾವತ್ತೂ ಮಾಡಿಲ್ಲ ಎಂಬುವುದನ್ನು ಅಲ್ಲಾಹು ಮತ್ತು ಕುರಾನ್ ಮೇಲೆ ಪ್ರಮಾಣ ಮಾಡಿ ಹೇಳುತ್ತಿದ್ದೇವೆ. ಇದೊಂದು ಕಪೋಲಕಲ್ಪಿತ ದೂರಾಗಿದ್ದು, ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಮನೆಯನ್ನು ಕುತಂತ್ರದಿಂದ ವಶಪಡಿಸಿಕೊಳ್ಳಲು ನಮ್ಮ ಸಹೋದರ ಮಾಡಿದ ಸಂಚು ಇದಾಗಿದೆ ಎಂದು ಆರೋಪಿಸಿದ್ದಾರೆ.
ಮಹಮ್ಮದ್ ಮತ್ತು ಖತೀಜಮ್ಮ ನಮ್ಮ ತಂದೆ-ತಾಯಿಯಾಗಿದ್ದು, 4 ಗಂಡು ಮಕ್ಕಳು ಮತ್ತು 5 ಹೆಣ್ಣು ಮಕ್ಕಳ ಸಂಸಾರ ನಮ್ಮದಾಗಿದೆ. ಕೆದಿಲ ಗ್ರಾಮದ ಬೀಟಿಗೆಯಲ್ಲಿ ನಾವು 2006 ರಲ್ಲಿ ಈ ಮನೆಯನ್ನು ಕೆದಿಲ ಸಹಕಾರಿ ಸಂಘದಿಂದ ಸಾಲ ಪಡೆದು ನಿರ್ಮಿಸಿದ್ದೆವು. ಕಳೆದ 18 ವರ್ಷಗಳಿಂದ ಮನೆಗೆ ಬಾರದಿರುವ ನಮ್ಮ ಸಹೋದರ ಇಸ್ಮಾಯಿಲ್ ಈಗ ಈ ಮನೆಯನ್ನು ವಶಪಡಿಸಿಕೊಳ್ಳಲು ಈ ಸುಳ್ಳಿನ ನಾಟಕ ಹೆಣೆದಿದ್ದಾನೆ .ನಾವು ಮನೆಯನ್ನು ಧ್ವಂಸ ಮಾಡಿಲ್ಲ. ತಂದೆತಾಯಿಯನ್ನು ಹೊರಹಾಕಿಲ್ಲ. ನಾದುರಸ್ಥಿಯಲ್ಲಿದ್ದ ಶೌಚಾಲಯವನ್ನು ಕೆಡವಿ ಆ ಭಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲು ಕಾಮಗಾರಿ ನಡೆಸಿದ್ದೇವೆ ಅಷ್ಟೆ ಎಂದು ಅವರು ಸ್ಪಷ್ಟ ಪಡಿಸಿದರು.
ನಾವು ಶೌಚಾಲಯ ಕೆಡವಿದ ಸಂದರ್ಭದಲ್ಲಿ ತಂದೆ ತಾಯಿ ಈ ಮನೆಯಲ್ಲಿಯೇ ಇರಲಿಲ್ಲ. ಪೇರಮೊಗ್ರು ಎಂಬಲ್ಲಿರುವ ಪುತ್ರಿಯ ಮನೆಯಲ್ಲಿದ್ದರು. ಬೀಟಿಗೆ ಮನೆಯಲ್ಲಿ ಕಳೆದ 8 ತಿಂಗಳಿನಿಂದ ಯಾರೂ ವಾಸ್ತವ್ಯ ಇರಲಿಲ್ಲ. ಮನೆಯಲ್ಲಿ ಇರದ ತಂದೆ ತಾಯಿಯನ್ನು ನಾವು ಮನೆಯಿಂದ ಹೊರದೂಡುವುದಾದರೂ ಹೇಗೆ . ತಂದೆ ತಾಯಿಯರನ್ನು ನಾವು ಯಾವತ್ತೂ ದೂರ ಮಾಡಿಲ್ಲ, ಮಾಡುವುದೂ ಇಲ್ಲ ಅತ್ಯಂತ ಪ್ರೀತಿಯಿಂದ ನಾವೇ ಅವರನ್ನು ನೋಡಿಕೊಂಡಿದ್ದೆವು. ಇದೀಗ ನನ್ನ ಪತ್ನಿ ಹೆರಿಗೆಗೆ ತವರು ಮನೆಗೆ ಹೋಗಿರುವ ಕಾರಣ ಅವರು ಪುತ್ರಿಯ ಮನೆಗೆ ಹೋಗಿದ್ದಾರೆ. ನಮ್ಮನ್ನು ಹೆತ್ತವರಿಗೆ ಹಿಂಸೆ ನೀಡುವಂತ ನೀಚತನವನ್ನು ಕಲ್ಪಿಸಲೂ ನಮ್ಮಿಂದ ಸಾಧ್ಯವಿಲ್ಲ. ಕಳೆದ 18 ವರ್ಷಗಳಿಂದ ತಂದೆ ತಾಯಿಯನ್ನು ನೋಡದ ಸಹೋದರ ಇಸ್ಮಾಯಿಲ್ ಮತ್ತು ಆತನ ಪತ್ನಿ ಸಾಜಿದಾ ಸೇರಿಕೊಂಡು ಈ ಸಂಚು ರೂಪಿಸಿದ್ದಾರೆ. ಪಾಶ್ರ್ವವಾಯು ಪೀಡಿತರಾದ ತಂದೆಗೆ ಮಾತನಾಡಲೂ ಕಷ್ಟವಾಗುತ್ತಿದೆ. ವೃದ್ಧ ತಾಯಿ ಎಂದೂ ನಮ್ಮ ಬಗ್ಗೆ ಕೆಟ್ಟದು ಮಾತನಾಡಿಲ್ಲ ಎಂದು ಹೇಳಿದರು.
ನಾವು ತಾಯಿಯ ಚಿನ್ನ ಮತ್ತು ನಗದು ಅಪಹರಿಸಿದ್ದೇವೆ ಎಂದು ಸಹೋದರ ಇಸ್ಮಾಯಿಲ್ ಪುತ್ತೂರು ನಗರಠಾಣೆಯಲ್ಲಿ ದೂರು ನೀಡಿದ್ದಾರೆ. ಇದೂ ಸತ್ಯಕ್ಕೆ ದೂರವಾಗಿದ್ದು ಈ ಹಣವನ್ನು ಹಿಂದೆ ತೆಗೆದುಕೊಂಡು ಹೋಗಿರುವುದು ಇಸ್ಮಾಯಿಲ್ ಬನ್ನೂರು ಹಾಗೂ ಅಕ್ಕನ ಗಂಡ ಸೂರಿಬೈಲು ಅಬ್ದುಲ್ಲ. ತಾಯಿಯ ಅಡವಿಟ್ಟ ಚಿನ್ನ ಈಗಲೂ ಬ್ಯಾಂಕಿನಲ್ಲಿದೆ ಎಂದು ತಿಳಿಸಿದ ಅವರು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪತ್ರಕರ್ತರಿಗೆ ತೋರಿಸಿದರು.







