ಅಮೆರಿಕದ ಹಿತಾಸಕ್ತಿಗಳಿಗೆ ಇರಾನ್ ಹಾನಿ ಮಾಡಿದರೆ ದೊಡ್ಡ ಪ್ರಮಾದ: ಟ್ರಂಪ್ ಎಚ್ಚರಿಕೆ
ವಾಶಿಂಗ್ಟನ್, ಮೇ 14: ಇರಾನ್ ಅಮೆರಿಕದ ಹಿತಾಸಕ್ತಿಗಳ ಮೇಲೆ ದಾಳಿ ನಡೆಸಿದರೆ ಅದು ಭಾರೀ ಪೆಟ್ಟು ತಿನ್ನುತ್ತದೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಜೊತೆಗಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯದಲ್ಲಿ ವಿಮಾನವಾಹಕ ಯುದ್ಧನೌಕೆ ಮತ್ತು ಬಿ-52 ಬಾಂಬರ್ ವಿಮಾನಗಳನ್ನು ನಿಯೋಜಿಸಿದ ಬಳಿಕ ಅಮೆರಿಕ ಈ ಎಚ್ಚರಿಕೆ ನೀಡಿದೆ.
‘‘ಇರಾನ್ ಜೊತೆ ಏನು ಸಂಭವಿಸುತ್ತದೆ ಎನ್ನುವುದನ್ನು ನಾವು ನೋಡುತ್ತೇವೆ. ಅವರು ಏನಾದರೂ ಮಾಡಿದರೆ, ಅದು ಅತ್ಯಂತ ದೊಡ್ಡ ಪ್ರಮಾದವಾಗುತ್ತದೆ’’ ಎಂದು ಸೋಮವಾರ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಹೋರ್ಮುಝ್ ಜಲಸಂಧಿಯಿಂದ ಸ್ವಲ್ಪ ಹೊರಗೆ ಫುಜೈರಾ ಕರಾವಳಿಯ ಸಮುದ್ರದಲ್ಲಿ ರವಿವಾರ ನಾಲ್ಕು ವಾಣಿಜ್ಯ ಹಡಗುಗಳಿಗೆ ಹಾನಿಯಾಗಿದೆ ಎಂಬುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವರದಿ ಮಾಡಿದ ಬಳಿಕ, ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ.
ಹಡಗುಗಳಿಗೆ ಹಾನಿಯಾಗಿರುವ ಘಟನೆಗಳಿಗೂ ತನಗೂ ಸಂಬಂಧವಿಲ್ಲ ಎಂದು ಇರಾನ್ ಹೇಳಿದೆ.