ಏರ್ ಇಂಡಿಯಾ ಕ್ಯಾಪ್ಟನ್ನಿಂದ ಲೈಂಗಿಕ ಕಿರುಕುಳ: ಮಹಿಳಾ ಪೈಲಟ್ ದೂರು
ಹೊಸದಿಲ್ಲಿ, ಮೇ 15: ತನ್ನ ಲೈಂಗಿಕ ಜೀವನ ಸೇರಿದಂತೆ ಹಲವು ಅಸಂಬದ್ಧ ಪ್ರಶ್ನೆಗಳನ್ನು ಕೇಳುವ ಮೂಲಕ ಏರ್ಇಂಡಿಯಾದ ಹಿರಿಯ ಕ್ಯಾಪ್ಟನ್ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಮಹಿಳಾ ಪೈಲಟ್ ಆರೋಪಿಸಿದ್ದು, ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ತರಬೇತಿ ಅವಧಿಯಲ್ಲಿ ಹಿರಿಯ ಕ್ಯಾಪ್ಟನ್ ಅವರು ಸಂಭಾವಿತರಂತೆ ಕಂಡು ಬಂದ ಕಾರಣ ಮೇ 5ರಂದು ತರಬೇತಿ ಮುಗಿದ ಬಳಿಕ ಅವರೊಂದಿಗೆ ಹೈದರಾಬಾದ್ನ ಹೋಟೆಲ್ಗೆ ರಾತ್ರಿ ಊಟಕ್ಕೆ ತೆರಳಿದ್ದೆ. ಆ ಸಂದರ್ಭ ಅವರು ತಮ್ಮ ವೈವಾಹಿಕ ಜೀವನದ ಬಗ್ಗೆ ಪ್ರಸ್ತಾಪಿಸಿದರು. ವಿವಾಹದ ಬಳಿಕ ಖಿನ್ನತೆ ಹಾಗೂ ಅಸಮಾಧಾನ ಹೆಚ್ಚಿದೆ ಎಂದ ಅವರು, “ನೀನು ಪತಿಯಿಂದ ದೂರವಿರುವ ಸಂದರ್ಭವನ್ನು ಹೇಗೆ ನಿಭಾಯಿಸುತ್ತೀ,ಪ್ರತೀ ದಿನ ಲೈಂಗಿಕ ಕ್ರಿಯೆಯ ಅವಶ್ಯಕತೆ ಇಲ್ಲವೇ” ಎಂದು ಪ್ರಶ್ನಿಸಿದರು. ಇದರಿಂದ ತೀವ್ರ ಮುಜುಗುರಕ್ಕೆ ಒಳಗಾದ ತಾನು, ಈ ಕುರಿತು ನಿಮ್ಮೊಂದಿಗೆ ಮಾತಾಡುವ ಅವಶ್ಯಕತೆ ನನಗಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಅಲ್ಲಿಂದ ಎದ್ದು ಹೊರಬಂದೆ ಎಂದು ಮಹಿಳಾ ಪೈಲಟ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ದೂರಿನ ಹಿನ್ನೆಲೆಯಲ್ಲಿ ಕ್ಯಾಪ್ಟನ್ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಏರ್ಇಂಡಿಯಾದ ವಕ್ತಾರರು ಹೇಳಿದ್ದಾರೆ.