ಉತ್ತರ ಕೊರಿಯದಲ್ಲಿ ತೀವ್ರ ಬರಗಾಲ: ಸರಕಾರಿ ಮಾಧ್ಯಮ ವರದಿ
ಸಿಯೋಲ್ (ದಕ್ಷಿಣ ಕೊರಿಯ), ಮೇ 15: ಉತ್ತರ ಕೊರಿಯದ ಈ ವರ್ಷದ ಸರಾಸರಿ ಮಳೆ ಮತ್ತು ಹಿಮಪಾತ 37 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟದ್ದಾಗಿತ್ತು ಎಂದು ಉತ್ತರ ಕೊರಿಯದ ಸರಕಾರಿ ಮಾಧ್ಯಮ ಬುಧವಾರ ಹೇಳಿದೆ.
ಉತ್ತರ ಕೊರಿಯದ ಆಹಾರ ಕೊರತೆಯ ಬಗ್ಗೆ ವಿಶ್ವಸಂಸ್ಥೆಯು ‘ತೀವ್ರ ಕಳವಳ’ ವ್ಯಕ್ತಪಡಿಸಿದ ದಿನಗಳ ಬಳಿಕ ಇದು ವರದಿಯಾಗಿದೆ.
ಅಂತರ್ರಾಷ್ಟ್ರೀಯ ಸಮುದಾಯದಿಂದ ಪ್ರತ್ಯೇಕಗೊಂಡಿರುವ ಬಡ ದೇಶ ಉತ್ತರ ಕೊರಿಯವು ತನ್ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳಿಗಾಗಿ ವಿಶ್ವಸಂಸ್ಥೆ ಮತ್ತು ಅಮೆರಿಕದ ಹಲವು ಸುತ್ತುಗಳ ದಿಗ್ಬಂಧನಗಳಿಗೆ ಒಳಪಟ್ಟಿರುವುದನ್ನು ಸ್ಮರಿಸಬಹುದಾಗಿದೆ. ಆ ದೇಶವು ತನ್ನ ಆಹಾರದ ಅವಶ್ಯಕತೆಗಳನ್ನು ಪೂರೈಸಲು ಹಲವು ವರ್ಷಗಳಿಂದ ಪರದಾಡುತ್ತಿದೆ ಹಾಗೂ ತೀವ್ರ ಆಹಾರ ಕೊರತೆಯಿಂದ ಬಳಲುತ್ತಿದೆ.
ಕಳೆದ ವರ್ಷ ಉತ್ತರ ಕೊರಿಯದ ಬೆಳೆಯು 2008ರ ಬಳಿಕದ ಅತ್ಯಂತ ಕಡಿಮೆ ಪ್ರಮಾಣದ್ದಾಗಿತ್ತು ಹಾಗೂ ಸುಮಾರು ಒಂದು ಕೋಟಿ ಜನರು (ಇಡೀ ಜನಸಂಖ್ಯೆಯ 40 ಶೇಕಡ) ಆಹಾರದ ತುರ್ತು ಅವಶ್ಯಕತೆಯಲ್ಲಿದ್ದಾರೆ ಎಂಬುದಾಗಿ ಕಳೆದ ತಿಂಗಳು ವಿಶ್ವಸಂಸ್ಥೆಯ ಜಾಗತಿಕ ಆಹಾರ ಕಾರ್ಯಕ್ರಮ (ಡಬ್ಲುಎಫ್ಪಿ) ಮತ್ತು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಜಂಟಿ ವರದಿಯೊಂದರಲ್ಲಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ.