ನಾಥೂರಾಮ್ ಗೋಡ್ಸೆ 'ದೇಶಭಕ್ತ' ಎಂದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್
ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ

ಹೊಸದಿಲ್ಲಿ,ಮೇ 16: ಮಹಾತ್ಮಾ ಗಾಂಧಿಯವರ ಹಂತಕ ನಾಥೂರಾಮ ಗೋಡ್ಸೆ ದೇಶಭಕ್ತನಾಗಿದ್ದ ಮತ್ತು ದೇಶಭಕ್ತನಾಗಿಯೇ ಉಳಿಯುತ್ತಾನೆ ಎಂದು ಘೋಷಿಸುವ ಮೂಲಕ ಮಧ್ಯಪ್ರದೇಶದ ಭೋಪಾಲ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಜ್ಞಾ ಸಿಂಗ್ ಠಾಕೂರ್ ಅವರು ಗುರುವಾರ ಇನ್ನೊಂದು ವಿವಾದಾತ್ಮಕ ಹೇಳಿಕೆಯನ್ನುನೀಡಿದ್ದಾರೆ.ಬಿಜೆಪಿ ಈ ಹೇಳಿಕೆಯನ್ನು ಖಂಡಿಸಿದೆ. ಠಾಕೂರ್ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದಾರೆ.
‘ಗೋಡ್ಸೆ ಸ್ವತಂತ್ರ ಭಾರತದ ಮೊದಲ ಉಗ್ರಗಾಮಿಯಾಗಿದ್ದ ಮತ್ತು ಆತ ಹಿಂದೂ ಆಗಿದ್ದ ’ ಎಂಬ ನಟ-ರಾಜಕಾರಣಿ ಕಮಲ್ ಹಾಸನ್ ಅವರ ಹೇಳಿಕೆಯ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸುತ್ತಿದ್ದ ಠಾಕೂರ್,ಗೋಡ್ಸೆ ದೇಶಭಕ್ತನಾಗಿದ್ದ ಮತ್ತು ದೇಶಭಕ್ತನಾಗಿಯೇ ಉಳಿಯಲಿದ್ದಾನೆ. ಆತನನ್ನು ಭಯೋತ್ಪಾದಕ ಎಂದು ಕರೆಯುವವರು ತಮ್ಮ ಆತ್ಮಪರೀಕ್ಷೆಯನ್ನು ಮಾಡಿಕೊಳ್ಳಬೇಕು. ಇಂತಹ ಜನರಿಗೆ ಚುನಾವಣೆಯಲ್ಲಿ ಜನರು ತಕ್ಕ ಉತ್ತರವನ್ನು ನೀಡುತ್ತಾರೆ ಎಂದರು.
ಠಾಕೂರ್ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ.
‘‘ಠಾಕೂರ್ ಹೇಳಿಕೆಯನ್ನು ಬಿಜೆಪಿಯು ಒಪ್ಪುವುದಿಲ್ಲ. ನಾವದನ್ನು ಖಂಡಿಸುತ್ತೇವೆ. ಪಕ್ಷವು ಅವರಿಂದ ಸ್ಪಷ್ಟನೆಯನ್ನು ಕೇಳಲಿದೆ. ಈ ಹೇಳಿಕೆಗಾಗಿ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ’’ ಎಂದು ಪಕ್ಷದ ವಕ್ತಾರ ಜಿವಿಎಲ್ ನರಸಿಂಹ ರಾವ್ ಹೇಳಿದರು.





