ಓವರ್‌ಟೈಮ್ ದುಡಿಮೆ ನಿಮ್ಮ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು ಗೊತ್ತೇ?
ಬದುಕಲು ದುಡಿಮೆ ನಿಜಕ್ಕೂ ಮುಖ್ಯ. ಆದರೆ ಕೆಲವೊವ್ಮೆು ಬದುಕು ಜೀವವನ್ನೇ ತಿನ್ನುತ್ತಿದೆ,ಯಾವುದೇ ಸುಖಸಂತೋಷವಿಲ್ಲ, ಕೆಲಸದ ಯಂತ್ರಗಳಾಗಿಬಿಟ್ಟಿದ್ದೇವೆ ಎಂದು ಅನಿಸುತ್ತದೆಯೇ? ಇಂತಹ ವೈರಾಗ್ಯ ಅನುಭವಿಸುವವರು ನೀವೊಬ್ಬರೇ ಅಲ್ಲ. ವಾರಕ್ಕೆ 40ರಿಂದ 50 ಗಂಟೆಗಳ ದುಡಿಮೆ ಎಂದರೆ ಬೇಕಾದಷ್ಟಾಯಿತು. ಆದರೆ ನಿಮ್ಮ ವೈರಾಗ್ಯಕ್ಕೆ ಕೆಲಸದ ಗಂಟೆಗಳನ್ನೇ ದೂರುವುದು ಅನ್ಯಾಯವಾಗುತ್ತದೆ. ಕೆಲಸದ ಸ್ಥಳ ಸೇರಲು ಮತ್ತು ಮರಳಲು ನಿಮ್ಮ ಪ್ರಯಾಣದ ಅವಧಿ,ಹೊರಗಿನ ಜವಾಬ್ದಾರಿಗಳು,ಕೆಲಸದ ವಾತಾವರಣ,ಮೆಚ್ಚುಗೆಯ ಮಾತುಗಳು ಮತ್ತು ಕೆಲಸದಲ್ಲಿ ತೃಪ್ತಿ ಇವೆಲ್ಲವೂ ನಮ್ಮ ವೃತ್ತಿಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಓವರ್‌ಟೈಮ್ ಅಥವಾ ಹೆಚ್ಚುವರಿ ದುಡಿಮೆ ಮಾಡಿದರೆ ನಾಲ್ಕು ಕಾಸು ಹೆಚ್ಚು ಸಿಗುತ್ತದೆ ನಿಜ,ಆದರೆ ಸುದೀರ್ಘ ಕಾಲ ಓವರ್‌ಟೈಮ್ ಕೆಲಸ ಮಾಡುತ್ತಿದ್ದರೆ ಅದು ಖಂಡಿತವಾಗಿಯೂ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಇಂತಹ ಕೆಲವು ಸಮಸ್ಯೆಗಳ ಮೇಲೆ ಕಣ್ಣಾಡಿಸೋಣ ಬನ್ನಿ....
ಕುತ್ತಿಗೆ ಮತ್ತು ಬೆನ್ನು ನೋವು
ನಮ್ಮ ಶರೀರದ ಪ್ರತಿಯೊಂದೂ ಅಂಗಕ್ಕೆ ವಿಶ್ರಾಂತಿಯ ಅಗತ್ಯವಿದೆ. ವಾರಕ್ಕೆ ಒಂದು ಅಥವಾ ಎರಡು ಸಲ ಓವರ್‌ಟೈಮ್ ಕೆಲಸ ಮಾಡುತ್ತಿದ್ದರೆ ಪರವಾಗಿಲ್ಲ. ಆದರೆ ದಿನವೂ ಇದನ್ನು ಮಾಡುವುದು ಒಳ್ಳೆಯದಲ್ಲ. ನೀವು ಹೆಚ್ಚೆಚ್ಚು ಕೆಲಸ ಮಾಡಿದಷ್ಟೂ ನಿಮ್ಮ ಬೆನ್ನು ಮತ್ತು ಕುತ್ತಿಗೆಯನ್ನು ಹೆಚ್ಚು ತೊಂದರೆಗೆ ಸಿಲುಕಿಸುತ್ತೀರಿ. ಸಾಮಾನ್ಯವಾಗಿ ಮಹಿಳೆಯರಲ್ಲಿ ಇಂತಹ ನೋವು ಕುತ್ತಿಗೆಯಲ್ಲಿ ಕಾಣಿಸಿಕೊಂಡರೆ ಪುರುಷರಲ್ಲಿ ಕೆಳಬೆನ್ನಿನಲ್ಲಿ ನೋವು ಆರಂಭಗೊಳ್ಳುತ್ತದೆ.
ಸಂಬಂಧಗಳಲ್ಲಿ ಸಮಸ್ಯೆಗಳು
ನಿಮ್ಮ ಶೇ.100ರಷ್ಟನ್ನು ನಿಮ್ಮ ಸಂಬಂಧಗಳಿಗೆ ನೀಡಲು ನೀವು ಪ್ರಯತ್ನಿಸುತ್ತಿದ್ದರೂ ಅಧಿಕ ಕೆಲಸದಿಂದ ನೀವು ಅನುಭವಿಸುತ್ತಿರಬಹುದಾದ ಒತ್ತಡ,ದಣಿವು ಮತ್ತು ಖಿನ್ನತೆ ಇವು ನಿಮ್ಮ ಸಂಬಂಧಗಳ ಮೇಲೂ ಪರಿಣಾಮವನ್ನು ಬೀರಬಹುದು ಮತ್ತು ಸಮಸ್ಯೆಗಳಿಗೆ ಕಾರಣವಾಗಬಹುದು.
ನಿಮ್ಮ ಹೃದಯವೂ ಓವರ್‌ಟೈಮ್ ಕೆಲಸ ಮಾಡುತ್ತದೆ
ನೀವು ಕೆಲಸದಲ್ಲಿ ಅತಿಯಾಗಿ ತೊಡಗಿಸಿಕೊಂಡಾಗ ನಿಮ್ಮ ಆರೋಗ್ಯದ ಬಗ್ಗೆ ಎಂದೂ ಗಮನ ನೀಡುವುದಿಲ್ಲ. ಕೆಲಸದ ಒತ್ತಡವು ಕಾರ್ಟಿಸಾಲ್ ಹಾರ್ಮೋನ್‌ನ್ನು ಬಿಡುಗಡೆಗೊಳಿಸುತ್ತದೆ ಮತ್ತು ಈ ಹಾರ್ಮೋನ್ ಹೃದಯಕ್ಕೆ ಹಾನಿಕಾರಕವಾಗಿದೆ. ಇದು ಕ್ರಮೇಣ ಪಾರ್ಶ್ವವಾಯು,ಪರಿಧಮನಿಯ ಕಾಯಿಲೆ,ಟೈಪ್ 2 ಮಧುಮೇಹ ಮತ್ತು ಕ್ಯಾನ್ಸರ್‌ಗೂ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ.
ಉತ್ಪಾದಕತೆಗೆ ತಡೆಯಾಗುತ್ತದೆ
ಯಾವುದೇ ಗಣನೀಯ ಫಲಿತಾಂಶಗಳಿಲ್ಲದೆ ಓವರ್‌ಟೈಮ್ ದುಡಿಮೆಯು ನಿಮ್ಮ ಉತ್ಪಾದಕತೆಯನ್ನು ತಗ್ಗಿಸಬಹುದು. ವಾರಕ್ಕೆ 70 ಗಂಟೆಗಳ ಕಾಲ ದುಡಿಯುವವರು ವಾಸ್ತವದಲ್ಲಿ ವಾರಕ್ಕೆ 56 ಗಂಟೆಗಳ ಕಾಲ ದುಡಿಯುವ ತಮ್ಮ ಸಹೋದ್ಯೋಗಿಗಳಿಗಿಂತ ಹೆಚ್ಚಿನ ಕೆಲಸ ಮಾಡಿರುವುದಿಲ್ಲ ಎನ್ನುವುದನ್ನು ಅಧ್ಯಯನಗಳು ಸಾಬೀತು ಮಾಡಿವೆ.
ರಾತ್ರಿ ಕಡಿಮೆ ನಿದ್ರೆ,ಹಗಲಿನಲ್ಲ್ಲಿ ಹೆಚ್ಚು ದಣಿವು
ಓವರ್‌ಟೈಮ್ ದುಡಿಮೆಯಿಂದಾಗಿ ರಾತ್ರಿ ಸುಖನಿದ್ರೆ ಮಾಡಲು ಸಮಯ ಸಿಗುವುದಿಲ್ಲ ಮತ್ತು ಹಗಲಿನಲ್ಲಿ ಹೆಚ್ಚು ದಣಿವಿಗೆ ಕಾರಣವಾಗುತ್ತದೆ. ನಿದ್ರೆಯ ಕೊರತೆಯು ನಮ್ಮ ಉತ್ಪಾದಕತೆಯನ್ನು ಕಡಿಮೆಗೊಳಿಸುತ್ತದೆ ಮತ್ತು ಟೈಪ್ 2 ಮಧುಮೇಹ ಹಾಗೂ ಹೃದ್ರೋಗದಂತಹ ದೀರ್ಘಕಾಲಿಕ ಅನಾರೋಗ್ಯಕ್ಕ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ.