ಯುವತಿಯನ್ನು ಕೊಂದು ಗರ್ಭ ಸೀಳಿ ಮಗುವನ್ನು ಹೊರ ತೆಗೆದ ತಾಯಿ-ಮಗಳ ಬಂಧನ
ಚಿಕಾಗೋ : ಹತ್ತೊಂಬತ್ತು ವರ್ಷದ ಗರ್ಭಿಣಿ ಯುವತಿಯನ್ನು ಕತ್ತು ಹಿಚುಕಿ ಸಾಯಿಸಿ ನಂತರ ಆಕೆಯ ಗರ್ಭ ಸೀಳಿ ಮಗುವನ್ನು ಹೊರ ತೆಗೆದ ಭೀಭತ್ಸ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಾಯಿ ಮತ್ತು ಮಗಳೊಬ್ಬಳನ್ನು ಬಂಧಿಸಿದ್ದಾರೆ.
ಗರ್ಭಿಣಿ ಯುವತಿ ಮಾರ್ಲೆನ್ ಒಖೊವ ಲೋಪೆಝ್ ಎ. 23ರಂದು ತನ್ನ ಮೂರು ವರ್ಷದ ಮಗುವನ್ನು ಡೇ ಕೇರ್ ಸೆಂಟರ್ ನಿಂದ ಕರೆ ತರಲೆಂದು ತನ್ನ ಕಪ್ಪು ಬಣ್ಣದ ಹೊಂಡಾ ಸಿವಿಕ್ ವಾಹನದಲ್ಲಿ ಹೋದವಳು ಮತ್ತೆ ವಾಪಸ್ ಬಂದಿರಲಿಲ್ಲ.
ಕಳೆದೊಂದು ತಿಂಗಳಲ್ಲಿ ಆಕೆಯ ಕುಟುಂಬ ಆಕೆಯ ವಾಪಸಾತಿಗೆ ರಾತ್ರಿ ಹಗಲು ಕಾದಿತ್ತು. ಆದರೆ ಬುಧವಾರ ಈ ಪ್ರಕರಣದ ಹಿಂದಿನ ಭಯಾನಕ ರಹಸ್ಯ ಬಯಲಾಗಿತ್ತು. ನೈಋತ್ಯ ಚಿಕಾಗೋದ ಮನೆಯೊಂದರ ಹೊರಗಡೆ ಕಸದ ರಾಶಿಯಲ್ಲಿ ಪತ್ತೆಯಾದ ಮಾನವ ಅವಶೇಷಗಳು ನಾಪತ್ತೆಯಾದ ಯುವತಿಯದ್ದೆಂದು ತಿಳಿದು ಬಂದಿತ್ತು.
ಗುರುವಾರ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಪೊಲೀಸರು 46 ವರ್ಷದ ಕ್ಲಾರಿಸಾ ಫಿಗುರೊವಾ ಹಾಗೂ ಆಕೆಯ ಪುತ್ರಿ ದೆಸಿರೀ ಫಿಗುರೊವಾ ಅವರನ್ನು ಆರೋಪಿಗಳೆಂದು ಗುರುತಿಸಿದ್ದಾರೆ. ಈ ಕೊಲೆಯನ್ನು ಮುಚ್ಚಿ ಹಾಕಲು ಯತ್ನಿಸಿದ್ದಕ್ಕಾಗಿ ಕ್ಲಾರಿಸಾಳ ಪ್ರಿಯತಮ ಪಿಯೊತರ್ ಬೊಬಕ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಕೊಲೆ ನಡೆಸಲು ತಾಯಿಗೆ ಸಹಾಯ ಮಾಡಿದ್ದನ್ನು ದೆಸಿರೀ ಒಪ್ಪಿದ್ದಾಳೆನ್ನಲಾಗಿದೆ.
ಯುವತಿ ನಾಪತ್ತೆಯಾದ ದಿನವೇ ಚಿಕಾಗೋದ ಆಸ್ಪತ್ರೆಗೆ ಕೊಲೆ ಆರೋಪಿಗಳಿಂದ ಕರೆಯೊಂದು ಹೋಗಿ ನವಜಾತ ಶಿಶುವೊಂದು ಗಂಭೀರ ಸ್ಥಿತಿಯಲ್ಲಿರುವುದಾಗಿ ಮಾಹಿತಿ ನೀಡಲಾಗಿತ್ತು.
ಕ್ಲಾರಿಸಾಳ 27 ವರ್ಷದ ಪುತ್ರ 2017ರಲ್ಲಿ ಮೃತಪಟ್ಟಿದ್ದನೆನ್ನಲಾಗಿದ್ದು ಕುಟುಂಬ ಮಗುವೊಂದನ್ನು ತಮ್ಮದೇ ಮಗುವೆಂಬಂತೆ ಬೆಳೆಸಲು ಯೋಚಿಸಿ ಇಂತಹ ಕೃತ್ಯವೆಸಗಿತ್ತೆಂದು ಸಂಶಯಿಸಲಾಗಿದೆ.