‘ಚೈಲ್ಡ್‌ಲೈನ್-1098’ರ ಜನಜಾಗೃತಿ ಜಾಥಾ

ಮಂಗಳೂರು, ಮೇ 17: ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು, ತುರ್ತು ಸ್ಪಂದನೆಯ ಸಲುವಾಗಿ ‘1098’ ನಂಬರಿಗೆ ಕರೆ ಮಾಡಿ ಮಕ್ಕಳ ರಕ್ಷಣೆಯಲ್ಲಿ ಸಹಭಾಗಿಗಳಾಗಿ ಎಂದು ದ.ಕ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಕ್ಕಳ ಸಹಾಯವಾಣಿ ದಿನಾಚರಣೆ ಹಿನ್ನೆಲೆಯಲ್ಲಿ ದ.ಕ. ಚೈಲ್ಡ್ ಲೈನ್ ಹಾಗೂ ವಿವಿಧ ಸರಕಾರಿ ಇಲಾಖೆಗಳ ಸಹಯೋಗ ದೊಂದಿಗೆ ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಶುಕ್ರವಾರ ಆಯೋಜಿಸಲಾದ ‘ಚೈಲ್ಡ್‌ಲೈನ್-1098’ರ ಜನಜಾಗೃತಿ ಜಾಥಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳ ರಕ್ಷಣೆಯ ಹಿನ್ನೆಲೆಯಲ್ಲಿ ಎಲ್ಲಾ ಸರಕಾರಿ ಇಲಾಖೆಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಸಮಾಜ ಸಂಘಟನೆಗಳು ಕೂಡ ಈ ನಿಟ್ಟಿನಲ್ಲಿ ವಿಶೇಷ ಅರಿವು ಪಡೆದಿರಬೇಕು. ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆ-ಸವಾಲುಗಳು ಎದುರಾದಾಗ ಅದರಿಂದ ಹೊರ ಬರಲು 1098 ಸಂಖ್ಯೆಯು ನೆರವಾಗಲಿದೆ ಎಂದು ಉಸ್ಮಾನ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜ ಮಾತನಾಡಿ ಒಂದು ಮಗು ಯಾವುದೇ ಕಾರಣಕ್ಕೂ ಒಂಟಿಯಲ್ಲ. ಯಾವುದೇ ಮಗುವಿಗೆ ಅಂತಹ ಭಾವನೆ ಬರಬಾರದು. ಅದಕ್ಕಾಗಿ ಸರಕಾರದ ವಿವಿಧ ಇಲಾಖೆಗಳು ಮಕ್ಕಳ ರಕ್ಷಣೆಗಾಗಿ ವಿಶೇಷ ಆದ್ಯತೆ ನೀಡುತ್ತಿದೆ. ಯಾವುದೇ ಮಗು ಸಹಾಯಕ್ಕೆ ಯಾಚಿಸಿದರೆ ಅಥವಾ ಸಮಸ್ಯೆ, ದೌರ್ಜನ್ಯಕ್ಕೆ ಸಿಲುಕಿರುವುದು ಗೊತ್ತಾದರೆ 1098 ಸಂಖ್ಯೆಯ ಮೂಲಕ ಇಲಾಖೆಯ ಗಮನಕ್ಕೆ ತರಬೇಕು. ಈ ಮೂಲಕ ಮಗುವಿನ ರಕ್ಷಣೆಗೆ ನಾವೆಲ್ಲರು ಶ್ರಮಿಸಬೇಕು ಎಂದರು.
ದ.ಕ. ಜಿಲ್ಲೆಯಲ್ಲಿ 2018ರಲ್ಲಿ ಬಾಲಕಾರ್ಮಿಕರು 57, ಬಾಲ್ಯ ವಿವಾಹ 50, ದೈಹಿಕ ದೌರ್ಜನ್ಯ 105, ಮಾನಸಿಕ ದೌರ್ಜನ್ಯ 87, ಲೈಂಗಿಕ ದೌರ್ಜನ್ಯ 27, ಶಾಲೆಯಿಂದ ಹೊರಗುಳಿದವರು 63 ಸೇರಿದಂತೆ ವಿವಿಧ ವಿಷಯದಲ್ಲಿ 879 ಪ್ರಕರಣಗಳು ವರದಿಯಾಗಿವೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವರಾಮಯ್ಯ, ಆರೋಗ್ಯ ಇಲಾಖೆಯ ಡಾ.ರಾಜೇಶ್, ರೋಶನಿ ನಿಲಯದ ಜೂಲಿಯೆಟ್, ಮಕ್ಕಳ ರಕ್ಷಣಾಧಿಕಾರಿ ಶ್ಯಾಮಲಾ, ಸೆಂಟ್ರಲ್ ರೈಲು ನಿಲ್ದಾಣದ ಸ್ಟೇಷನ್ ಮ್ಯಾನೆಜರ್ ರಾಮ್‌ಕುಮಾರ್, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ರೇವಣ್ಣ ಮತ್ತಿತರರು ಪಾಲ್ಗೊಂಡಿದ್ದರು.
ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಟ ಜನಜಾಗೃತಿ ಜಾಥಾ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿತು.












