ಮಂಗಳೂರು: ಜಾನುವಾರು ವಧಾಗೃಹಕ್ಕೂ ಕಾಡಿದ ನೀರಿನ ಸಮಸ್ಯೆ !
ಮಂಗಳೂರು, ಮೇ 17: ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿರುವ ಕುದ್ರೋಳಿಯಲ್ಲಿರುವ ಜಾನುವಾರು ವಧಾಗೃಹಕ್ಕೂ ನೀರಿನ ಸಮಸ್ಯೆ ಕಾಡತೊಡಗಿದೆ. ಇದರಿಂದ ಜಾನುವಾರು, ವಧಾ ಕಾರ್ಮಿಕರು ಸಾಕಷ್ಟು ತೊಂದರೆಗೊಳಗಾಗುತ್ತಿದ್ದಾರೆ. ಜೊತೆಗೆ ವಧಾಗೃಹದ ಶುಚಿತ್ವವು ಕಾರ್ಮಿಕರಿಗೆ ಸವಾಲಾಗಿ ಪರಿಣಮಿಸಿದೆ.
ಮಂಗಳೂರಿನ ಕಸಾಯಿ ಖಾನೆ (ವಧಾಗೃಹ)ಗೆ 50ಕ್ಕೂ ಅಧಿಕ ವರ್ಷದ ಇತಿಹಾಸವಿದೆ. ಮೊದಲು ಕಸಾಯಿ ಖಾನೆ ಅತ್ತಾವರದಲ್ಲಿತ್ತು. ಬಳಿಕ ಕುದ್ರೋಳಿಗೆ ಸ್ಥಳಾಂತರಗೊಂಡಿತ್ತು. ಇಲ್ಲಿ ಆಡು, ಕುರಿ ಹಾಗು ಎತ್ತು, ಕೋಣವನ್ನು ವಧೆ ಮಾಡಲಾಗುತ್ತದೆ. ಆದರೆ ಮೂಲಭೂತ ಸೌಕರ್ಯವಿಲ್ಲದೆ ವಧಾಗೃಹ ನಲುಗುತ್ತಿದೆ ಎಂಬ ಆರೋಪದ ಮಧ್ಯೆಯೇ ಇದೀಗ ನೀರಿನ ಸಮಸ್ಯೆ ವಧಾಗೃಹವನ್ನು ಬಿಗಡಾಯಿಸುವಂತೆ ಮಾಡಿದೆ.
ಈ ಹಿಂದೆ ವಧಾಗೃಹಕ್ಕೆ ಮನಪಾದಿಂದಲೇ ನೀರು ಪೂರೈಕೆಯಾಗುತ್ತಿತ್ತು. ನೀರಿನ ಸಮಸ್ಯೆ ಸೃಷ್ಟಿಯಾಗಿ ರೇಶನಿಂಗ್ ವ್ಯವಸ್ಥೆ ಜಾರಿಯಾದ ಬಳಿಕ ವಧಾಗೃಹದಲ್ಲಿ ನೀರಿನ ಕೊರತೆಯುಂಟಾಗಿ ಸಂಕಷ್ಟ ಎದುರಾಗಿದೆ. ವಧಾಗೃಹದ ಬಳಿ ಬಾವಿಯೊಂದಿದ್ದು, ಸದ್ಯ ಅದರಿಂದಲೇ ನೀರನ್ನು ಬಳಸಲಾಗುತ್ತಿದೆ. ಆದರೆ, ಜಾನುವಾರುಗಳ ವಧೆಯ ಬಳಿಕ ಜಾನುವಾರುಗಳ ರಕ್ತ, ಹಸಿ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಶುಚಿಗೊಳಿಸಲು ಸಾಕಷ್ಟು ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಆದರೆ, ಸಕಾಲಕ್ಕೆ ನೀರು ಸಿಗದ ಕಾರಣ ಶುಚಿತ್ವ ಮರೀಚಿಕೆಯಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಕುದ್ರೋಳಿ ವಧಾಗೃಹಕ್ಕೆ ಪಾಲಿಕೆಯಿಂದ ಸಕಾಲಕ್ಕೆ ನೀರು ಪೂರೈಕೆಯಾಗುತ್ತಿಲ್ಲ. ನೀರಿನ ರೇಶನಿಂಗ್ ಪ್ರಾರಂಭಗೊಂಡ ಬಳಿಕ ಇಲ್ಲಿ ಶುಚಿತ್ವವು ಸವಾಲಾಗಿದೆ. ಪಾಲಿಕೆಯ ಅಧಿಕಾರಿಗಳು ಸಮಸ್ಯೆ ಬಿಗಡಾಯಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ಎಂದು ಮಾಂಸ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಲಿ ಹಸನ್ ಆಗ್ರಹಿಸಿದ್ದಾರೆ.







