ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಈಜುಕೊಳದ ಮೊರೆ ಹೋದ ಜನತೆ

ಸಾಂದರ್ಭಿಕ ಚಿತ್ರ
ಬಳ್ಳಾರಿ, ಮೇ 17: ಗಣಿನಾಡು ಬಳ್ಳಾರಿ ಸದ್ಯ ಕಾದ ಕೆಂಡದಂತಹ ಬಿಸಿಲು. ಸೂರ್ಯನ ಪ್ರತಾಪಕ್ಕೆ ಜನರು ಬೆಂದು ಹೈರಾಣಾಗುತ್ತಿದ್ದಾರೆ. ಹೊರಗಡೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಮನೆಯೊಳಗಡೆ ಬೀಸುವ ಫ್ಯಾನ್ನ ಬಿಸಿಗಾಳಿಗೆ ಕೂರಲು ಆಗುತ್ತಿಲ್ಲ. ಬಿರುಬಿಸಿಲಿನಿಂದ ತಪ್ಪಿಸಿಕೊಳ್ಳಲು ಬಿಸಿಲನಾಡ ಜನತೆ ಇದೀಗ ಈಜುಕೊಳದ ಮೊರೆ ಹೋಗುತ್ತಿದ್ದಾರೆ.
ಹೌದು ಗಣಿನಾಡು ಬಳ್ಳಾರಿಯಲ್ಲಿ ನೆತ್ತಿಯ ಮೇಲೆ ಸೂರ್ಯನ ಬಿಸಿಲಿನ ಝಳಕ್ಕೆ ಜನರು ಸುಸ್ತಾಗಿದ್ದಾರೆ. ಬೆಳಗ್ಗೆ 10 ಗಂಟೆಗೇ ಮನೆಯಿಂದ ಹೊರಗಡೆ ಬರುವುದು ಹೇಗೆ ಎಂದು ಚಿಂತೆ ಮಾಡುತ್ತಿದ್ದಾರೆ. ಬಿಸಿಲಿನ ದಾಹ ತಣಿಸಲು ಸಾಕಷ್ಟು ಹಣ್ಣು, ಜ್ಯೂಸ್ನಂತಹ ತಂಪು ಪಾನೀಯಗಳನ್ನ ಸೇವಿಸಿದರೂ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಬಿರುಬಿಸಿಲಿನಿಂದ ಪಾರಾಗಲು ಯುವಕರು, ಚಿಕ್ಕ ಚಿಕ್ಕ ಮಕ್ಕಳು ಈಜುಕೊಳದ ಮೊರೆ ಹೋಗುತ್ತಿದ್ದಾರೆ. ಬಳ್ಳಾರಿ ನಗರದ ಜಿಲ್ಲಾ ಮೈದಾನದಲ್ಲಿರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವ್ಯಾಪ್ತಿಯ ಈಜುಕೊಳಕ್ಕೆ ಈಗ ಎಲ್ಲಿಲ್ಲದ ಬೇಡಿಕೆಯಿದೆ. ಬೇಸಿಗೆಯಲ್ಲಿ ಪ್ರತಿದಿನ ಎರಡು ಸಾವಿರ ಜನರು ಈಜಾಡಲು ಬರುತ್ತಿದ್ದಾರೆ. ಬೇರೆ ದಿನಗಳಲ್ಲಿ ಬೆರಳಿಣಿಕೆಯಷ್ಟು ಮಾತ್ರ ಜನರು ಈಜುಕೊಳಕ್ಕೆ ಬರುತ್ತಿದ್ದರು. ಆದರೆ, ಇದೀಗ ಬೆಳಗ್ಗೆಯಿಂದ ರಾತ್ರಿಯವರಿಗೆ ಈಜುಕೊಳದಲ್ಲಿ ಈಜುತ್ತಾ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಈಜುಕೊಳದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಹಲವು ಬ್ಯಾಚ್ಗಳನ್ನ ಮಾಡಲಾಗಿದ್ದು, ಬ್ಯಾಚ್ ಅನುಸಾರ ಜನರನ್ನು ಬಿಡಲಾಗುತ್ತದೆ. ನಿತ್ಯ ಸಾವಿರಾರು ಯುವಕರು-ಚಿಕ್ಕ ಚಿಕ್ಕಮಕ್ಕಳು, ಮಹಿಳೆಯರು, ಪುರುಷರು ಹೀಗೆ ಎಲ್ಲರೂ ದೇಹ ತಣಿಸಿಕೊಳ್ಳಲು ಈಜುಕೊಳಕ್ಕೆ ಬರುತ್ತಿದ್ದಾರೆ.
ಹೆಚ್ಚಾಗಿ ಪೋಷಕರು ಚಿಕ್ಕ ಚಿಕ್ಕ ಮಕ್ಕಳನ್ನ ಈಜುಕೊಳಕ್ಕೆ ಕರೆತರುತ್ತಿದ್ದಾರೆ. ಸುಮಾರು 2 ಗಂಟೆಗಳ ಕಾಲ ಈಜುಕೊಳದಲ್ಲಿ ಕಾಲ ಕಳೆಯುತ್ತಾ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಬಿಸಿಲು ಇರುವುದರಿಂದ ಸಾಕಷ್ಟು ಜನರು ಈಜುಕೊಳಕ್ಕೆ ಬರುತ್ತಿದ್ದಾರೆ ಎನ್ನುತ್ತಾರೆ ಜಿಲ್ಲಾ ಕ್ರೀಡಾಂಗಣದ ಈಜುಕೊಳದ ಮ್ಯಾನೇಜರ್ ಪ್ರದೀಪ್.
ಬಳ್ಳಾರಿಯಲ್ಲಿ 43 ಉಷ್ಣಾಂಶ ದಾಖಲಾಗಿದ್ದರಿಂದ ದಿನೇ ದಿನೇ ಉಷ್ಣಾಂಶ ಹೆಚ್ಚಾಗುತ್ತಲೇ ಇದೆ. ಕೆಂಡದಂತ ಉರಿಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನರು ಹಲವು ಮಾರ್ಗೋಪಾಯಗಳನ್ನ ಕಂಡುಕೊಂಡಿದ್ದಾರೆ. ಅದರಲ್ಲಿ ಹೆಚ್ಚಾಗಿ ಈಜುಕೊಳ ಮೊರೆ ಹೋಗುವುದು ಒಂದಾಗಿದೆ.







