ಸಾವಲ್ಲೂ ಸಾರ್ಥಕತೆ ಮೆರೆದ ಕಾಸರಗೋಡಿನ ಚಂದ್ರಶೇಖರ್: ಅಂಗಾಂಗ ದಾನದ ಮೂಲಕ ಹಲವರ ಬಾಳಿಗೆ ಬೆಳಕು
ಝೀರೊ ಟ್ರಾಫಿಕ್ನಲ್ಲಿ ಬೆಂಗಳೂರಿಗೆ ಅಂಗಾಂಗಳ ಸಾಗಾಟ

ಚಂದ್ರಶೇಖರ್
ಮಂಗಳೂರು, ಮೇ 17: ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಕಾಸರಗೋಡಿನ ಚಂದ್ರಶೇಖರ್ (48) ಎಂಬವರ ಪ್ರಮುಖ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮೃತರ ಕುಟುಂಬಸ್ಥರು ಆ ಮೂಲಕ ಹಲವರ ಬಾಳಿಗೆ ಬೆಳಕಾದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.
ಮೇ 11ರಂದು ನಡೆದ ರಸ್ತೆ ಅಪಘಾತವೊಂದರಲ್ಲಿ ಚಂದ್ರಶೇಖರ್ ಗಂಭೀರ ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 16ರಂದು ಮಧ್ಯರಾತ್ರಿ ಚಂದ್ರಶೇಖರ್ರ ‘ಮೆದುಳು ನಿಷ್ಕ್ರಿಯ’ಗೊಂಡಿರುವುದಾಗಿ ಆಸ್ಪತ್ರೆ ವೈದ್ಯರು ಘೋಷಿಸಿದ್ದರು.
ಈ ನೋವಿನ ಸಂದರ್ಭದಲ್ಲೂ ಸಮಯಪ್ರಜ್ಞೆ ಮೆರೆದ ಮೃತರ ಕುಟುಂಬ (ಪತ್ನಿ ನಾಗವೇಣಿ) ಸ್ವಯಂಪ್ರೇರಿತವಾಗಿ ಚಂದ್ರಶೇಖರ್ರ ಅಂಗದಾನ ಮಾಡಲು ಮುಂದೆ ಬಂದಿತ್ತು. ಕೂಡಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ವೈದ್ಯರು ದಾನಿಯ ಕಣ್ಣುಗಳು, ಹೃದಯ ಕವಾಟಗಳು, ಪಿತ್ತಜನಕಾಂಗ ಮತ್ತು ಮೂತ್ರಪಿಂಡಗಳನ್ನು ದಾನ ಮಾಡಲು ವ್ಯವಸ್ಥೆ ಕಲ್ಪಿಸಿದರು.
ಸಾಗಾಟಕ್ಕೆ ಝೀರೋ ಟ್ರಾಫಿಕ್: ಚಂದ್ರಶೇಖರ್ರ ಅಂಗಾಂಗಗಳನ್ನು ನಿಯಮ ಪ್ರಕಾರ ತುರ್ತು ಅಗತ್ಯವಿರುವ ರೋಗಿಗಳಿಗೆ ಅಳವಡಿಸಲು ತುರ್ತಾಗಿ ಸಾಗಾಟ ಮಾಡಬೇಕಿತ್ತು. ಇದಕ್ಕಾಗಿ ಮಂಗಳೂರು ನಗರ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದರು. ಪಂಪ್ವೆಲ್ನಲ್ಲಿರುವ ಆಸ್ಪತ್ರೆಯಿಂದ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ವರೆಗೆ ಗ್ರೀನ್ ಕಾರಿಡಾರ್ನಲ್ಲಿ ದಾನಿಯ ಹೃದಯ ಕವಾಟಗಳು ಮತ್ತು ಪಿತ್ತಜನಕಾಂಗವನ್ನು ಕೊಂಡೊಯ್ಯಲಾಯಿತು. ಅಲ್ಲಿಂದ ಬೆಂಗಳೂರಿಗೆ ವಿಮಾನದ ಮೂಲಕ ಸಾಗಿಸಲಾಯಿತು. ಅವುಗಳನ್ನು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ನೀಡಲಾಯಿತು.
ಚಂದ್ರಶೇಖರ್ರ ಒಂದು ಮೂತ್ರಪಿಂಡವನ್ನು ಮಣಿಪಾಮದ ಕೆಎಂಸಿ ಆಸ್ಪತ್ರೆಗೆ, ಇನ್ನೊಂದು ಮೂತ್ರಪಿಂಡವನ್ನು ಇಂಡಿಯಾನಾ ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವರಿಗೆ ಕಸಿ ಮಾಡಲಾಗಿದೆ. ಕಣ್ಣುಗಳನ್ನು ಸ್ಥಳೀಯ ವ್ಯಕ್ತಿಗೆ ಕಸಿ ಮಾಡಲಾಯಿತು.
ಇಂಡಿಯಾನಾ ಆಸ್ಪತ್ರೆಯ ಮೂತ್ರಶಾಸ್ತ್ರಜ್ಞ ಡಾ.ಅಭಿಜಿತ್, ಮೂತ್ರಪಿಂಡ ಶಾಸ್ತ್ರಜ್ಞ ಡಾ. ಪ್ರದೀಪ್ ಮತ್ತು ಫೋರ್ಟಿಸ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಯಶವಂತ್ ಅಂಗದಾನ ಶಸ್ತ್ರಚಿಕಿತ್ಸೆ ನಡೆಸಿದರು ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.
ಅಪೇಕ್ಷಿತ ರೋಗಿಗಳಿಗೆ ಪರಿಹಾರ ಒದಗಿಸಲು ಮತ್ತು ಅವರ ಜೀವಗಳನ್ನು ಉಳಿಸುವ ಉದ್ದೇಶದಿಂದ ಅಂಗಗಳನ್ನು ದಾನ ಮಾಡುವ ನಿರ್ಧಾರ ತೆಗೆದುಕೊಂಡ ಮೃತರ ಕುಟುಂಬಕ್ಕೆ ನಾನು ಕೃತಜ್ಞನಾಗಿದ್ದೇನೆ. ತಮ್ಮ ವೈಯಕ್ತಿಕ ದುಃಖದ ಹೊರತಾಗಿಯೂ ಅವರು ಮಾನವೀಯತೆ ತೋರಿಸಿದ್ದಾರೆ.
- ಡಾ.ಯೂಸುಫ್ ಕುಂಬ್ಳೆ,
ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ







