ಕಂಕನಾಡಿ: ಮಳೆಗಾಗಿ ಸಾರ್ವಜನಿಕ ಸಾಮೂಹಿಕ ಪ್ರಾರ್ಥನೆ

ಮಂಗಳೂರು, ಮೇ 17: ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಕಂಕನಾಡಿ ಮಾರುಕಟ್ಟೆ ಎದುರಿನ ಮೈದಾನದಲ್ಲಿ ಶುಕ್ರವಾರ ಮಳೆಗಾಗಿ ಸಾರ್ವಜನಿಕ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ರೆ.ಫಾ.ಮ್ಯಾಕ್ಸಿಂ ಪಿಂಟೊ, ಮಂಗಳೂರಿನಲ್ಲಿ ಕೊಳವೆಬಾವಿ ಮೂಲಕ ನೀರು ಬರಬೇಕಿದೆ. ಆ ಕೊಳವೆಬಾವಿಯನ್ನು ನೆಲದಲ್ಲಿ ಕೊರೆಯುವ ಬದಲು ಇಂದು ನೇರವಾಗಿ ಆಕಾಶದಲ್ಲಿ ಕೊಳವೆ ಬಾವಿ ತೆರೆಯೋಣ. ಈ ಮೂಲಕ ನಮ್ಮ ಪ್ರಾರ್ಥನೆಯ ಧ್ವನಿ ದೇವರಿಗೆ ತಲುಪಲಿದೆ. ನಂಬಿದವರನ್ನು ದೇವನೆಂದೂ ಕೈಬಿಡುವುದಿಲ್ಲ. ಮಳೆ ಬರಲಿದೆ ಎಂದರು.
ನಮ್ಮೆಲ್ಲರ ಪ್ರಾರ್ಥನೆಗೆ ದೇವರು ಕಿವಿಗೊಡಲಿದ್ದಾನೆ. ಮಳೆಯ ರೂಪದಲ್ಲಿ ದೇವನ ಪ್ರತಿಕ್ರಿಯೆ ಬರಲಿದೆ. ಮಳೆಯಿಂದಾಗಿಯೇ ಪ್ರಕೃತಿಯು ಜೀವಂತವಾಗಿರಲಿದೆ. ಪ್ರಕೃತಿಯಿಂದ ಮಾನವ ಜೀವಿ ಸಹಿತ ಸಕಲ ಜೀವರಾಶಿ ಬದುಕಲಿದೆ. ಎಲ್ಲರೂ ಮಾನವೀಯ ನೆಲೆಯಲ್ಲಿ ಬದುಕು ಸಾಗಿಸಬೇಕು. ದೇವನ ಅನುಗ್ರಹ ಸದಾ ಇರುತ್ತದೆ ಎಂದು ಹೇಳಿದರು.
ದೇರಳಕಟ್ಟೆ ಜುಮ್ಮಾ ಮಸೀದಿ ಖತೀಬ್ ಯಾಸಿರ್ ಅರಫತ್ ಮಾತನಾಡಿ, ದ.ಕ. ಜಿಲ್ಲೆಯ ಹಲವು ಭಾಗದಲ್ಲಿ ಬಹುತೇಕ ಮಳೆ ಆರಂಭವಾಗಿದೆ. ಆದರೆ ಮಂಗಳೂರನ್ನು ಹೊರತುಪಡಿಸಿ ಮಳೆಯಾಗುತ್ತಿದೆ. ಸಾಮೂಹಿಕ ಪ್ರಾರ್ಥನೆ ಸರ್ವಕಾಲಕ್ಕೂ ಶ್ರೇಷ್ಠವಾಗಿದೆ. ಇದೊಂದು ಉತ್ತಮ ಕಾರ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಮುಂಗಾರು ಮಳೆ ಆರಂಭವಾಗುವುದು ಈ ಬಾರಿ ತಡವಾಗಿದೆ. ಪ್ರತಿವರ್ಷವೂ ಈ ವೇಳೆಗಾಗಲೇ ಮಳೆ ಸುರಿಯುತ್ತಿತ್ತು. ಕರಾವಳಿಗೆ ಮಳೆಯ ಪ್ರವೇಶವಿನ್ನೂ ದೂರ ಇದೆ ಎಂದು ಹವಾಮಾನ ಇಲಾಖೆ ವರದಿ ಪ್ರಕಟಿಸಿದೆ. ಆದರೆ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಮನುಷ್ಯರಿಂದ ನೀರನ್ನು ಉತ್ಪಾದನೆ ಮಾಡಲಾಗುವುದಿಲ್ಲ. ಸಂಕಟ ಬಂದಾಗ ದೇವರಿಗೆ ಮೊರೆ ಹೋಗಲೇಬೇಕು. ಖಂಡಿತ ದೇವರು ಮಳೆ ತರಲಿದ್ದಾನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಶಿಧರ್ ಹೆಗಡೆ, ಅಶೋಕ್ ಡಿ.ಕೆ., ಅಶೋಕ ಹೆಗಡೆ, ಸದಾಶಿವ, ಸುಶಿಲ್ ನರೋನ್ಹ, ಅಬಿತಾ ಮಿಸ್ಕಿತ್, ಅಪ್ಪಿ, ರಾಧಾಕೃಷ್ಣ ಕಾರಂತ, ಮೊಂತೆರೊ ಲೋಬೊ, ವಸಂತ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.










