ಲೋಕಸಭಾ ಚುನಾವಣಾ ಅಭಿಯಾನಕ್ಕೆ ತೆರೆ: ಮೇ 19ರಂದು ಕೊನೆಯ ಹಂತದ ಮತದಾನ

ಹೊಸದಿಲ್ಲಿ, ಮೇ.17: 2019ರ ಲೋಕಸಭಾ ಚುನಾವಣೆಗೆ ಒಂದು ತಿಂಗಳಿಗೂ ಅಧಿಕ ಕಾಲ ನಡೆದ ಪ್ರಚಾರ ಅಭಿಯಾನಕ್ಕೆ ಶುಕ್ರವಾರ ತೆರೆಬಿದ್ದಿದೆ. ಏಳು ಹಂತಗಳಲ್ಲಿ ನಡೆಸಲು ನಿರ್ಧರಿಸಲಾಗಿದ್ದ ಮತದಾನದ ಅಂತಿಮ ಹಂತ ಮೇ 19ರಂದು ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಘಟಾನುಘಟಿಗಳ ಭವಿಷ್ಯ ನಿರ್ಧರಿಸಲಿದೆ.
ಪಂಜಾಬ್ನ ಎಲ್ಲ 13 ಸ್ಥಾನಗಳು, ಉತ್ತರ ಪ್ರದೇಶದ 13, ಪಶ್ಚಿಮ ಬಂಗಾಳದ 9, ಬಿಹಾರ ಮತ್ತು ಮಧ್ಯ ಪ್ರದೇಶದ ತಲಾ 8 ಸ್ಥಾನಗಳು, ಹಿಮಾಚಲ ಪ್ರದೇಶದ 4, ಜಾರ್ಖಂಡ್ನ 3 ಮತ್ತು ಚಂಡೀಗಡದ ಒಂದು ಸ್ಥಾನಕ್ಕೆ ಮೇ 19ರಂದು ಮತದಾನ ನಡೆಯಲಿದೆ. ಇದೇ ಮೊದಲಬಾರಿ ಚುನಾವಣಾ ಆಯೋಗದ ಆದೇಶದಂತೆ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರವನ್ನು ನಿಗದಿತ ಸಮಯಕ್ಕಿಂತ 20 ಗಂಟೆ ಮೊದಲೇ ಕೊನೆಗೊಳಿಸಲಾಗಿದೆ. ಬಿಜೆಪಿ ಮತ್ತು ತೃಣಮೂಲ ಕಾರ್ಯಕರ್ತರ ಮಧ್ಯೆ ನಡೆದ ಗಲಭೆಯ ಹಿನ್ನೆಲೆಯಲ್ಲಿ ಆಯೋಗ ಈ ನಿರ್ಧಾರ ತೆಗೆದುಕೊಂಡಿದೆ. ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಮತದಾನ ನಡೆಯುವಂತೆ ನೋಡಿಕೊಳ್ಳಲು ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದ ವಾರಣಾಸಿಯಿಂದ ಪ್ರಧಾನಿ ಮೋದಿ ಎರಡನೇ ಬಾರಿ ಆಯ್ಕೆ ಬಯಸಿದ್ದರೆ ಬಿಜೆಪಿಯ ಇತರ ಹತ್ತು ಪ್ರಮುಖ ನಾಯಕರೂ ಏಳನೇ ಹಂತದ ಮತದಾನದಲ್ಲಿ ಜನರಿಂದ ಪುನರಾಯ್ಕೆಯನ್ನು ಬಯಸಿದ್ದಾರೆ.