8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 59 ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಮತದಾನ
ಲೋಕಸಭಾ ಚುನಾವಣೆಯ ಅಂತಿಮ ಹಂತ

ಪ್ರಧಾನಿ ನರೇಂದ್ರ ಮೋದಿ,ಕೇಂದ್ರ ಸಚಿವ ರವಿಶಂಕರ ಪ್ರಸಾದ್,ಕಾಂಗ್ರೆಸ್ ನಾಯಕ ಶತ್ರುಘ್ನ ಸಿನ್ಹಾ ಸೇರಿದಂತೆ ಪ್ರಮುಖರು ಕಣದಲ್ಲಿ
ಹೊಸದಿಲ್ಲಿ,ಮೇ 18: ಏಳನೇ ಮತ್ತು ಅಂತಿಮ ಹಂತದ ಲೋಕಸಭಾ ಚುನಾವಣೆಗಾಗಿ ಮತದಾನ ರವಿವಾರ ನಡೆಯಲಿದೆ. ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿಕೊಂಡಿರುವ 59 ಕ್ಷೇತ್ರಗಳಲ್ಲಿಯ 10 ಕೋಟಿಗೂ ಅಧಿಕ ಮತದಾರರು 912 ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧರಿಸಲಿದ್ದಾರೆ. ಪಂಜಾಬ್,ಉತ್ತರ ಪ್ರದೇಶ,ಪಶ್ಚಿಮ ಬಂಗಾಳ,ಮಧ್ಯಪ್ರದೇಶ,ಬಿಹಾರ,ಹಿಮಾಚಲ ಪ್ರದೇಶ,ಜಾರ್ಖಂಡ್ ಮತ್ತು ಚಂಡಿಗಡಗಳಲ್ಲಿ ಮತದಾನ ನಡೆಯಲಿದೆ. ಸುಗಮ ಮತದಾನಕ್ಕಾಗಿ 1.12 ಲಕ್ಷಕ್ಕೂ ಅಧಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು,ಭಾರೀ ಭದ್ರತೆಯನ್ನು ಏರ್ಪಡಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ,ಕೇಂದ್ರ ಸಚಿವ ರವಿಶಂಕರ ಪ್ರಸಾದ್,ಬಿಜೆಪಿ ಸಂಸದೆ ಹಾಗೂ ಹಿರಿಯ ನಟಿ ಕಿರಣ್ ಖೇರ್,ಕಾಂಗ್ರೆಸ್ ನಾಯಕ ಶತ್ರುಘ್ನ ಸಿನ್ಹಾ,ಕೇಂದ್ರ ಸಚಿವೆ ಹಾಗೂ ಎಸ್‌ಎಡಿ ನಾಯಕಿ ಹರ್ಸಿಮ್ರತ್ ಕೌರ್ ಮತ್ತು ನಟ-ರಾಜಕಾರಣಿ ಸನ್ನಿ ಡಿಯೋಲ್ ಅವರು ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ.
ಮಾಜಿ ಪಂಜಾಬ್ ಮುಖ್ಯಮಂತ್ರಿ ಸುಖಬೀರ ಸಿಂಗ್ ಬಾದಲ್, ಆರ್‌ಜೆಡಿ ನಾಯಕಿ ಹಾಗು ಲಾಲು ಪ್ರಸಾದ ಯಾದವರ ಪುತ್ರಿ ಮೀಸಾ ಭಾರ್ತಿ, ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ರಾಮಕೃಪಾಲ ಯಾದವ, ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಮತ್ತು ಭೋಜಪುರಿ ನಟ-ರಾಜಕಾರಣಿ ರವಿಕಿಶನ್ ಅವರೂ ರವಿವಾರ ಹಣೆಬರಹ ನಿರ್ಧಾರವಾಗಲಿರುವ ಪ್ರಮುಖ ಅಭ್ಯರ್ಥಿಗಳಲ್ಲಿದ್ದಾರೆ.
ಮೋದಿಯವರು ಸ್ಪರ್ಧಿಸಿರುವ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಲ್ಲಿ 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬಿಹಾರದ 8,ಹಿಮಾಚಲ ಪ್ರದೇಶದ ಎಲ್ಲ 4,ಜಾರ್ಖಂಡ್‌ನ 3,ಮಧ್ಯಪ್ರದೇಶದ 8,ಪಂಜಾಬ್‌ನ ಎಲ್ಲ 13,ಉ.ಪ್ರದೇಶದ 13,ಪ.ಬಂಗಾಲದ 9 ಮತ್ತು ಚಂಡಿಗಡದ ಏಕೈಕ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.







