ನಳಿನ್‌ರನ್ನು ಪಕ್ಷದಿಂದ ಉಚ್ಚಾಟಿಸಲಿ: ಐವನ್

ಮಂಗಳೂರು, ಮೇ 18: ನಳಿನ್‌ಕುಮಾರ್ ಗೋಡ್ಸೆ ಪರ ಹೇಳಿಕೆ ನೀಡಿದ್ದನ್ನು ಬಿಜೆಪಿಯವರು ಬೆಂಬಲಿಸುವುದಾದರೆ ಅದಕ್ಕಾಗಿಯೇ ಮೆರವಣಿಗೆ ಮಾಡಲಿ. ಇಲ್ಲದಿದ್ದರೆ ನಳಿನ್‌ರನ್ನು ಪಕ್ಷದಿಂದ ಉಚ್ಚಾಟಿಸಲಿ ಎಂದು ಐವನ್ ಡಿಸೋಜ ಒತ್ತಾಯಿಸಿದರು.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ನಳಿನ್ ಅವರು ಗೋಡ್ಸೆಯನ್ನು ಹೀರೋ ಮಾಡಲು ಹೊರಟಿದ್ದಾರೆ. ಗೋಡ್ಸೆ ಎದುರು ಕಸಬ್ 72 ಮಂದಿಯನ್ನು ಕೊಂದದ್ದು ಏನೂ ಅಲ್ಲ ಅಂತಾದರೆ ಜನರ ಜೀವ ಉಳಿಸಲು ಹೋಗಿ ಸಾವಿಗೀಡಾದ ಹೇಮಂತ ಕರ್ಕರೆ ಹೀರೋನಾ ಝೀರೋನಾ? ಅವರ ಬಗ್ಗೆ ನಳಿನ್ ಪ್ರತಿಕ್ರಿಯೆ ಏನು ಎಂದು ಪ್ರಶ್ನಿಸಿದರು.
ರಾಜೀವ್‌ಗಾಂಧಿ ಕೊಂದವರ ಸಂಖ್ಯೆ 17 ಸಾವಿರ ಅಂತಾರೆ. ಹಾಗಾದರೆ ಗೋಧ್ರಾ ಹತ್ಯಾಕಾಂಡದಲ್ಲಿ ಸತ್ತವರಿಗೆ ಕಾರಣಕರ್ತರು ಯಾರು ಎಂಬುದನ್ನೂ ನಳಿನ್ ಕುಮಾರ್ ಉತ್ತರಿಸಲಿ ಎಂದು ಆಗ್ರಹಿಸಿದ ಐವನ್, ದೇಶಕ್ಕಾಗಿ ಪ್ರಾಣ ತೆತ್ತವರಿಗೇ ದೇಶದ್ರೋಹದ ಹಣೆಪಟ್ಟಿ ಕಟ್ಟುವ ಬಿಜೆಪಿ ಸಂಸ್ಕೃತಿ ದೇಶಕ್ಕೆ ಅಪಾಯಕಾರಿ ಎಂದರು.
ನಳಿನ್ ಕುಮಾರ್ ಜಿಲ್ಲೆಗೆ ಬೆಂಕಿ ಕೊಡುವವರಾದರೆ, ಅನಂತ ಹೆಗಡೆ ರಾಜ್ಯಕ್ಕೆ ಬೆಂಕಿ ಕೊಡೋರು, ಸಾಧ್ವಿ ಪ್ರಜ್ಞಾ ಸಿಂಗ್ ದೇಶಕ್ಕೆ ಬೆಂಕಿ ಹಚ್ಚೋರು ಎಂದು ಟೀಕಿಸಿದ ಅವರು, ಇವರ ಮನಸ್ಥಿತಿ ಹೀಗೆಯೇ ಮುಂದುವರಿದರೆ ಜನಹೋರಾಟ ನಡೆದು ರಕ್ತಕ್ರಾಂತಿಯಾಗಲಿದೆ ಎಂದು ಕಿಡಿಕಾರಿದರು.







