ಮಂಗಳೂರಲ್ಲಿ ಜಲಕ್ಷಾಮ ಮತ್ತಷ್ಟು ಜಟಿಲ: ರೇಷನಿಂಗ್ ಮಾರ್ಪಾಟುಗೊಳಿಸಲಿರುವ ಜಿಲ್ಲಾಡಳಿತ ?
ಮಂಗಳೂರು, ಮೇ 18: ತುಂಬೆ ಅಣೆಕಟ್ಟೆಯಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಇಳಿಕೆಯಾಗುತ್ತಿದ್ದು, ನಗರದಲ್ಲಿ ನೀರಿನ ಬವಣೆ ಮತ್ತಷ್ಟು ಹೆಚ್ಚಾಗುತ್ತಿದೆ.
ಪ್ರಸ್ತುತ ನಾಲ್ಕು ದಿನ ನೀರು, ಎರಡು ದಿನ ಸ್ಥಗಿತದ ರೇಷನಿಂಗ್ ವ್ಯವಸ್ಥೆ ಇದೆ. ತುಂಬೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿರುವ ಕಾರಣ ನಾಲ್ಕು ದಿನ ನೀರು, ಮೂರು ದಿನ ನೀರು ಪೂರೈಕೆ ಸ್ಥಗಿತ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಜಿಲ್ಲಾಡಳಿತ ನಿರ್ಧರಿಸುವ ಬಗ್ಗೆ ಆಲೋಚಿಸುತ್ತಿದೆ. ಪ್ರಸ್ತುತ ಇರುವ ವ್ಯವಸ್ಥೆಯಲ್ಲಿಯೇ ನಗರದ ಎತ್ತರದ ಪ್ರದೇಶಗಳಿಗೆ ನೀರು ಪೂರೈಕೆ ಆಗುತ್ತಿಲ್ಲ ಎಂಬ ದೂರುಗಳಿವೆ.
ನೀರು ಬಂದಾಗ ಸಂಗ್ರಹಿಸಿಡುವ ಮೂಲಕ ಎರಡು ದಿನ ನೀರು ಪೂರೈಕೆ ಇಲ್ಲದ ಸಂದರ್ಭ ನಗರದ ಜನತೆ ನೀರಿನ ಕೊರತೆ ನೀಗಿಸುತ್ತಿದ್ದರು. ನೀರು ಸಂಗ್ರಹಕ್ಕೆ ಅವಕಾಶವಿಲ್ಲದ ಮನೆಯವರು ಮೂರು ದಿನ ನೀರು ಇಲ್ಲದಿದ್ದರೆ ಪರದಾಡುವ ಸ್ಥಿತಿ ಎದುರಾಗಲಿದೆ.
ನಗರದ ಬಿಕರ್ನಕಟ್ಟೆ, ನಂತೂರು, ಶಕ್ತಿನಗರ, ಮಂಗಳಾದೇವಿ, ಪಾಂಡೇಶ್ವರ, ಉರ್ವಸ್ಟೋರ್, ಕೋಡಿಕಲ್, ಬೋಳಾರ ಮುಂತಾದ ಪ್ರದೇಶಗಳಿಗೆ ನೀರು ಪೂರೈಕೆಯಾದ ದಿನ ರಾತ್ರಿಯಾದರೂ ನೀರು ತಲುಪುತ್ತಿಲ್ಲ. ಈ ಪೈಕಿ ಕೆಲ ಪ್ರದೇಶಗಳಿಗೆ ಟ್ಯಾಂಕರ್ ನೀರು ಪೂರೈಕೆಯಾಗುತ್ತಿದೆ.
ಹೋಟೆಲ್, ಮಳಿಗೆಗಳು, ಫ್ಲಾಟ್‌ಗಳು ಖಾಸಗಿ ಟ್ಯಾಂಕರ್ ಮೂಲಕ ನೀರಿನ ಸಂಗ್ರಹದಲ್ಲಿ ತೊಡಗಿವೆ. ಆದರೆ ಜನಸಾಮಾನ್ಯರು ಮಾತ್ರ ಹೆಚ್ಚಿನ ಸಮಸ್ಯೆ ಎದುರಿಸಬೇಕಾದ ಸ್ಥಿತಿ ಇದೆ. ಅವರು ರೇಷನಿಂಗ್ ನೀರಿಗಾಗಿಯೇ ಕಾಯಬೇಕು. ಈ ನೀರು ಎತ್ತರದ ಪ್ರದೇಶಗಳಿಗೆ ಬರುತ್ತಿಲ್ಲ ಎಂಬ ದೂರು ಕೂಡ ಕೇಳಿ ಬರುತ್ತಿದೆ. ಅಂತೂ ಜನತೆಯ ನೀರಿನ ಬವಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.







