ತಾನು ಕೊಲೆಯಾಗಿದ್ದೇನೆ ಎಂದು ನಟಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಅಪ್ಲೋಡ್ ಮಾಡಿದ ಯುವಕ !

ದಾವಣಗೆರೆ, ಮೇ 19: ತನ್ನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಮುಖದ ಮೇಲೆ ರಕ್ತದಂತೆ ಕಾಣಲು ಕುಂಕುಮ ಹಾಕಿಕೊಂಡು ಕೊಲೆಯಾದ ರೀತಿಯಲ್ಲಿ ಪೋಟೋ ತೆಗೆದು ಜಾಲತಾಣದಲ್ಲಿ ಹರಿಬಿಟ್ಟಿದ್ದ ಕಿಡಿಗೇಡಿ ಯುವಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ನಗರದ ಯಲ್ಲಮ್ಮ ನಗರ ನಿವಾಸಿ ಪರಶುರಾಮ ಕೊಲೆಯಾದಂತೆ ನಟಿಸಿ, ಪೊಲೀಸರಿಗೆ ತಲೆನೋವು ತಂದು, ಸುಸ್ತು ಮಾಡಿದ್ದ ಯುವಕ.
ಕಳೆದೊಂದು ವಾರದಲ್ಲೇ ನಗರದಲ್ಲಿ ನಡೆದ 3 ಕೊಲೆಗಳಿಂದ ರೋಸಿದ್ದ ಪೊಲೀಸರಿಗೆ ನಾಲ್ಕನೇ ಕೊಲೆಯ ಪೋಟೋಗಳು ಜಾಲತಾಣದಲ್ಲಿ ಹರಿದಾಡಿದ್ದು, ಮುಖದ ತುಂಬಾ ರಕ್ತ ಹರಿದು ಬರ್ಬರವಾಗಿ ಹತ್ಯೆ ಮಾಡಲಾದ ಯುವಕನ ಶವದ ಪೋಟೋಗಳು ಪೊಲೀಸರ ನಿದ್ದೆಗೆಡಿಸಿದ್ದವು.
ಶುಕ್ರವಾರ ಸಂಜೆ ವಾಟ್ಸಪ್‍ನಲ್ಲಿ ಪರಶುರಾಮನ ಶವದ ಪೋಟೋ ನೋಡಿದ ಕುಟುಂಬದವರು ಕಂಗಾಲಾಗಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಶೋಧ ನಡೆಸಿದಾಗ ತಡರಾತ್ರಿ ಸಿಕ್ಕಿದ್ದು ಯುವಕನ ಕೊಲೆಯಾದ ಪರಶುರಾಮನ ಶವವಲ್ಲ. ಬದಲಿಗೆ ಪರಶುರಾಮನೇ ಸಿಕ್ಕಿದ್ದಾನೆ.
ಕುಡಿದ ಮತ್ತಿನಲ್ಲಿ ತನ್ನ ಮುಖದ ಮೇಲೆ ತಾನೇ ಕುಂಕುಮದ ನೀರು ಹಾಕಿಕೊಂಡು ಕೊಲೆಯಾದಂತೆ ನಟಿಸಿ, ಪೋಟೋ ಕ್ಲಿಕ್ಕಿಸಿ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಕುರಿತು ಪೊಲೀಸರು ಲಾಠಿ ರುಚಿ ತೋರಿಸಿದಾಗ ತನಗೆ ಜೀವ ಭಯವಿತ್ತು. ಆದ್ದರಿಂದ ಈ ರೀತಿ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಈತನ ಹುಚ್ಚಾಟಕ್ಕೆ ಮನೆಯವರಷ್ಟೇ ಅಲ್ಲದೆ ಇಡೀ ಪೊಲೀಸ್ ಇಲಾಖೆ ಕೂಡಾ ದಂಗಾಗಿದೆ.







